ಬೆಂಗಳೂರು : ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.
ಇದೀಗ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಗೆದ್ದು ಕಪ್ ಎತ್ತಿಹಿಡಿದ ಆರ್‌ಸಿಬಿ ತಂಡ ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸುವ ಸಲುವಾಗಿ ತವರೂರು ಬೆಂಗಳೂರಿಗೆ ಆಗಮಿಸಲಿದೆ. ಅಹಮದಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಆರ್‌ಸಿಬಿ ಆಟಗಾರರು ಹೊರಟು ಮಧ್ಯಾಹ್ನ 1:30ರ ವೇಳೆಗೆ ಬೆಂಗಳೂರು ಹೆಚ್‌ಎಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ. ಹೀಗಾಗಿ HAL ಏರ್ಪೋರ್ಟ್ಗೆ ಸಾರ್ವಜನಿಕ ಪ್ರವೇಶ ನಿಷೇಧ ಹೇರಲಾಗಿದ್ದು, ಸುತ್ತ ಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಸಿಗ್ನಲ್ ಫ್ರೀ ಟ್ರಾಫಿಕ್ನಲ್ಲಿ ಆರ್‌ಸಿಬಿ ತಂಡ ತಾಜ್ ವೆಸ್ಟೆಂಡ್ ಹೋಟೆಲ್‌ಗೆ ತೆರಳಲಿದೆ. ಇಲ್ಲಿ ವಿಶ್ರಾಂತಿ ಪಡೆದ ಬಳಿಕ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಟ್ರೋಫಿ ನೀಡಲಿದೆ. ಸಿಎಂ ಭೇಟಿ ಬಳಿಕ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಓಪನ್-ಟಾಪ್ ಬಸ್ ಮೂಲಕ ಆರ್‌ಸಿಬಿ ತಂಡದ ಪರೇಡ್ ನಡೆಯಲಿದೆ. ಸುಮಾರು 1 ಕಿ.ಮೀ ವಿಜಯಯಾತ್ರೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಇನ್ನು ವಿಕ್ಟರಿ ಪರೇಡ್ ವೇಳೆ ABD, ಗೇಲ್ ಭಾಗಿಯಾಗುವ ಸಾಧ್ಯತೆಯಿದೆ.
ಸಾರ್ವಜನಿಕ ಮೆರವಣಿಗೆ ಬಳಿಕ 6 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ : ಪೌರ ಕಾರ್ಮಿಕನಿಗೆ ಜಾತಿ ನಿಂದನೆ, ಕೊಲೆ ಬೆದರಿಕೆ – FIR ಆದ್ರೂ ಬಿಜೆಪಿ ಮುಖಂಡ NR ರಮೇಶ್ ಬಂಧನ ಯಾಕಿಲ್ಲ?
