ಖ್ಯಾತ ನಿರ್ದೇಶಕ ಡಾ||ಎಸ್ ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು-ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಬಹುನಿರೀಕ್ಷಿತ “ಮಾರುತ” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.
ಸದ್ಯ ಚಿತ್ರಕ್ಕೆ ರೀ ರಕಾರ್ಡಿಂಗ್ ನಡೆಯುತ್ತಿದ್ದು, ಭಾರತದ ಹೆಸರಾಂತ ವಾದ್ಯಗಾರರು (ಮ್ಯುಸಿಷಿಯನ್ಸ್) ಇದರಲ್ಲಿ ಪಾಲ್ಗೊಂಡಿದ್ದಾರೆ. “ಮಾರುತ” ಚಿತ್ರದಲ್ಲಿ ರೀರೆಕಾರ್ಡಿಂಗ್ ಸಹ ಪ್ರಮುಖವಾಗಿದ್ದು, ಅಂದುಕೊಂಡ ರೀತಿಯಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಮೊದಲ ಹಾಡಿಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಉಳಿದ ಹಾಡುಗಳು ಅನಾವರಣವಾಗಲಿದೆ. ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣದಲ್ಲಿ, ಸದಭಿರುಚಿ ಚಿತ್ರಗಳ ನಿರ್ದೇಶಕ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ, ತಮ್ಮ ಅಮೋಘ ನಟನೆಯ ಮೂಲಕ ಜನಮನಸೂರೆಗೊಂಡಿರುವ ದುನಿಯಾ ವಿಜಯ್ ಹಾಗೂ ಉತ್ಸಾಹಿ ಯುವನಟ ಶ್ರೇಯಸ್ ಮಂಜು ಅವರ ಸಮಾಗಮದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ “ಮಾರುತ” ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿ ಬರುತ್ತಿರುವ “ಮಾರುತ” ಚಿತ್ರಕ್ಕೆ ಎಸ್ ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನವಿದ್ದು, ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, , ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನವಿದೆ.
ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು, ಬೃಂದಾ(ನಾಯಕಿ), ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಮುಂತಾದವರ ತಾರಾಬಳಗವಿರುವ ಈ ಚಿತ್ರದ ವಿಶೇಷಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟಿಸಿದ್ದಾರೆ.
ಇದನ್ನೂ ಓದಿ : ‘ರಾಯಲ್’ ಫ್ಯಾನ್ಸ್ಗೆ ಗುಡ್ ನ್ಯೂಸ್ – ಬೆಂಗಳೂರಿನಲ್ಲಿ RCB ವಿಕ್ಟರಿ ಪರೇಡ್.. ಎಲ್ಲಿಂದ, ಯಾವಾಗ ಶುರು ಗೊತ್ತಾ?
