ಬೆಂಗಳೂರು : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್ ಕದನದಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಜಯೋತ್ಸವದ ಮೆರವಣಿಗೆಯನ್ನು (ವಿಕ್ಟರಿ ಪರೇಡ್) ಘೋಷಣೆ ಮಾಡಿದೆ.
ನಿನ್ನೆ ನಡೆದಿದ್ದ ಟ್ರೋಫಿ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳಿಂದ ಗೆಲುವು ಸಾಧಿಸಿ ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ. ಈ ಗೆಲುವಿನ ಬೆನ್ನಲ್ಲೆ ಆರ್‌ಸಿಬಿ ಫ್ರಾಂಚೈಸಿ ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ಗೆಲುವಿನ ಸಂಭ್ರಮಾಚರಣೆ ಮಾಡಲು ವಿಜಯೋತ್ಸವದ ಮೆರವಣಿಗೆಯನ್ನು ಘೋಷಣೆ ಮಾಡಿದೆ.
ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ಮೆರವಣಿಗೆ ನಡೆಯಲಿದ್ದು, ಇದು ಮಧ್ಯಾಹ್ನ 3:30ಕ್ಕೆ ವಿಧಾನಸೌಧದಿಂದ ಆರಂಭವಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ. ಈ ಹಿನ್ನೆಲೆ ಐತಿಹಾಸಿಕ ದಿನವನ್ನು ಆಚರಿಸಲು ಇಡೀ ಬೆಂಗಳೂರು ಸಜ್ಜಾಗಿದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಈ ಮೆರವಣಿಗೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ಈ ಕುರಿತು ಆರ್‌ಸಿಬಿ ತಂಡ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಆರ್‌ಸಿಬಿಯ ವಿಜಯೋತ್ಸವ ಪರೇಡ್. ಇದು ನಿಮಗಾಗಿ, 12th ಮ್ಯಾನ್ ಆರ್ಮಿ ಎಂದು ಅಭಿಮಾನಿಗಳನ್ನು ಉಲ್ಲೇಖಿಸಲಾಗಿದ್ದು, ಆರ್‌ಸಿಬಿ ಸೋಲಿನಲ್ಲಿ ಮತ್ತು ಗೆಲುವಿನಲ್ಲೂ ಪ್ರತಿ ಭಾರಿ ಬೆಂಬಲಾವಗಿ ನಿಂತ ನಿಷ್ಠಾವಂತ ಅಭಿಮಾನಿಗಳೆ ಈ ಗೆಲುವಿನ ಕಿರೀಟ ನಿಮ್ಮದೇ ಎಂದು ಬರೆದು ಪೋಸ್ಟ್ ಹಂಚಿಕೊಂಡಿದೆ.
ಹಾಗೆಯೇ ಯಾವ ವಿಕ್ಟರಿ ಪರೇಡ್ ಎಂದು ಆರ್‌ಸಿಬಿ ಮ್ಯಾನೇಜ್ಮೆಂಟ್ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಲಿದೆ. ಉನ್ನತ ಮೂಲಗಳ ಪ್ರಕಾರ ಇಂದು ಅಥವಾ ನಾಳೆ ವಿಕ್ಟರಿ ಪರೇಡ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಜಗತ್ತಿನಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳು ಜಿಯೋ ಹಾಟ್‌ಸ್ಟಾರ್‌ನಲ್ಲಿ ಆರ್‌ಸಿಬಿ ವಿಜಯೋತ್ಸವದ ಮೆರವಣಿಗೆ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ : ಈ ಸಲ ಕಪ್ ನಮ್ದು – ಆರ್‌ಸಿಬಿ ದಿಗ್ವಿಜಯಕ್ಕೆ ಸಿದ್ದು, ಡಿಕೆಶಿ, ಹೆಚ್‌ಡಿಕೆ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಸುರಿಮಳೆ!
