ಬೆಂಗಳೂರು : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿದ ಆರ್‌ಸಿಬಿ ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.
ಸದ್ಯ ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ.. ಆರ್‌ಸಿಬಿ ಐಪಿಎಲ್ 2025 ಗೆಲುವಿನ ಸಂಭ್ರಮ ಮನೆ ಮಾಡಿದೆ. ನಿನ್ನೆಯ ಪಂದ್ಯ ಲಾಯಲ್ ಫ್ಯಾನ್ಸ್‌ಗಾಗಿ ರಾಯಲ್ ಗೆಲುವಿನಂತಿತ್ತು. 18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಆ ಕ್ಷಣಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ.
ಜತ್ ಪಾಟೀದಾರ್ ಪಡೆ ಟ್ರೋಫಿ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮಿಗಿಲು ಮುಟ್ಟಿತು. ಬೆಂಗಳೂರಿನ ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿತ್ತು. ಪಟಾಕಿ ಸದ್ದುಗಳು ಮೊಳಗಿದವು. ಆರ್‌ಸಿಬಿ.. ಆರ್‌ಸಿಬಿ ಎಂಬ ಜಯಘೋಷ ಕಿವಿ ಗಡಚಿಕ್ಕವಂತಿತ್ತು. ಈ ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ.
ಬೆಂಗಳೂರಿನ ಓರಾಯನ್ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್‌ನಲ್ಲಿ ಆರ್‌ಸಿಬಿ ವರ್ಸಸ್ ಪಂಜಾಬ್ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮ್ಯಾಚ್ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಚರ್ಚ್ ಸ್ಟ್ರೀಟ್‌ನಲ್ಲಿ ಜನಸಾಗರವೇ ನೆರೆದಿತ್ತು. ಲೈವ್ ಸ್ಕ್ರೀನ್‌ನಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ ಮಾಡಿದರು.
ನವರಂಗ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಗೋವಿಂದರಾಜನಗರ ಗ್ರೌಂಡ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭಿಮಾನಿಗಳಲ್ಲಿ ಜೋಶ್ ಇತ್ತು. ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಯಿತು. ಆನೇಕಲ್ ಪಟ್ಟಣದ ತಿಲಕ್ ವೃತ್ತದಲ್ಲಿ ಆರ್‌ಸಿಬಿ ಗೆಳೆಯರ ಬಳಗ ಸಂಭ್ರಮಾಚರಣೆ ಮಾಡಿತು. ಆರ್‌ಸಿಬಿ ಪ್ರೇಮಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾಜ್‌ಕುಮಾರ್ ರಸ್ತೆ, ಮಾರತ್ತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ವಿಜಯನಗರ, ಎಂಜಿ ರಸ್ತೆ ಮೊದಲಾದ ಕಡೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸಿದರು. ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಿಗಟ್ಟಿ ಸಂಭ್ರಮಿಸಿದರು.
ಇದನ್ನೂ ಓದಿ : ನನ್ನ ಹೃದಯ, ನನ್ನ ಆತ್ಮ ಬೆಂಗಳೂರಿಗಾಗಿ… RCB ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಭಾವುಕ ನುಡಿ!
