ವಿಶಿಷ್ಠ ಕಥಾಹಂದರ ಹೊಂದಿರುವ ‘ದೇವಸಸ್ಯ’ ಚಿತ್ರದ ಟೈಟಲ್ ಟೀಸರ್ ರಿಲೀಸ್!

ದೇವಸಸ್ಯ ಒಂದು ವಿಶಿಷ್ಠ ಕಥಾಹಂದರವನ್ನು ಹೇಳುವ ಹಾಗೂ ಅಪರೂಪದ ಗಿಡದ ಸುತ್ತ ನಡೆಯುವ ಘಟನೆಗಳ ಗುಚ್ಛ. ಬಹುತೇಕ ಉತ್ತರ ಕನ್ನಡದವರೇ ಸೇರಿ ಮಾಡಿರುವ ಪ್ಯಾನ್ ಇಂಡಿಯಾ ಚಿತ್ರವಿದು. ಕನ್ನಡ, ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ದೇಶಾದ್ಯಂತ ತೆರೆಗೆ ಬರುತ್ತಿದೆ. ಅನಂತ ಫಿಲಂಸ್ ಅಡಿಯಲ್ಲಿ ಅನಂತಕುಮಾರ್ ಹೆಗ್ಡೆ ಅವರು ನಿರ್ಮಾಣ ಮಾಡಿರೋ ಈ ಚಿತ್ರಕ್ಕೆ ಕಾರ್ತಿಕ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ನಟ ನವೀನ್ ಕೃಷ್ಣ ಅವರು ಈ ಚಿತ್ರದ 5 ಭಾಷೆಯ ಟೀಸರನ್ನು ಬಿಡುಗಡೆ ಮಾಡಿದರು.

ನಿರ್ದೇಶಕ ಕಾರ್ತಿಕ್ ಭಟ್ ಅವರು, ಈ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಮೊದಲಿಂದಲೂ ನನಗೆ ಸಿನಿಮಾ ಹುಚ್ಚು. ಬೆಂಗಳೂರಿಗೆ ಬಂದ ಮೇಲೆ ಕೆಲವು ಸಿನಿಮಾ, ಸೀರಿಯಲ್​ಗಳಿಗೆ ಬರಹಗಾರನಾಗಿ ಕೆಲಸ ಮಾಡಿದೆ. ಸಿರ್ಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಕಥೆಯಿದು. ನಿರ್ಮಾಪಕರ ಪರಿಚಯ ಆದಮೇಲೆ ಅವರಿಗೆ ಈ ಕಥೆ ಹೇಳಿದೆ. ಕಥೆಯನ್ನು ತುಂಬಾನೇ ಇಷ್ಟಪಟ್ಟು ನಿರ್ಮಾಣ ಮಾಡುತ್ತಿದ್ದಾರೆ. ಇದು ಎರಡು ಊರುಗಳ ಮಧ್ಯೆ ನಡೆಯುವ ಕಥೆ. ಕಥೆಗಾಗೇ 2 ವರ್ಷ ಪೇಪರ್ ವರ್ಕ್ ರೆಡಿ ಮಾಡಿಕೊಂಡೆ. ಅಲ್ಲಿ ನಿರ್ಮಾಪಕರೂ ಜೊತೆಗಿದ್ದರು ಎಂದರು.

ಸಿದ್ದಿ ಹುಡುಗನ ಪಾತ್ರವನ್ನು ಸೆಲ್ವಿನ್ ದೇಸಾಯಿ ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರವನ್ನು ಅಹನ ಮಾಡಿದ್ದಾರೆ. 1995ರಲ್ಲಿ ನಡೆವ ಕಥೆಯಾಗಿದ್ದರಿಂದ ಅಂಥಾ ಲೊಕೇಶನ್ ಎಲ್ಲೂ ಸಿಗಲಿಲ್ಲ. ಹಾಗಾಗಿ ಸೆಟ್ ಹಾಕಿಸಿದ್ದೇವೆ. ಕೆಜಿಎಫ್ ಖ್ಯಾತಿಯ ಕರಣ್ ಅವರು ಅದ್ಭುತವಾಗಿ ಈ ಸೆಟ್ ಹಾಕಿದ್ದಾರೆ. ಈಗಾಗಲೇ 45 ದಿನಗಳ ಶೂಟಿಂಗ್ ನಡೆದಿದೆ. ಹೊಸಬರ ತಂಡ, ತುಂಬಾ ಆತ್ಮವಿಶ್ವಾಸದಿಂದ ಈ ಸಿನಿಮಾ ಮಾಡಿದ್ದೇವೆ. ದೇವಸಸ್ಯ ಏನು ಎನ್ನುವುದೇ ಚಿತ್ರ ನೋಡಿದ ನಂತರವೇ ಗೊತ್ತಾಗುತ್ತದೆ ಎಂದು ನಿರ್ದೇಶಕ ಕಾರ್ತಿಕ್ ಭಟ್ ಹೇಳಿದರು.

ನಿರ್ಮಾಪಕ ಅನಂತಕುಮಾರ್ ಹೆಗ್ಡೆ ಅವರು, ನಾನೂ ಒಬ್ಬ ಪತ್ರಕರ್ತ. ಸಿರ್ಸಿಯಲ್ಲಿ ವಿಶ್ವಂಬರ ಟಿವಿ ಚಾನೆಲ್ ನಡೆಸುತ್ತಿದ್ದೇನೆ. ನನಗೆ ಮೊದಲಿಂದಲೂ ಸಿನಿಮಾ ಹೀರೋ ಆಗಬೇಕೆಂಬ ಆಸೆಯಿತ್ತು. ಈಗ ನಿರ್ಮಾಪಕನಾಗಿದ್ದೇನೆ. ಹಿಂದೆ ನಮ್ಮದು ಬಡತನದ ಕುಟುಂಬ. ಬೆಂಗಳೂರಿಗೆ ಬಂದು ಅರ್ಚಕನಾಗಿ ಕೆಲಸ ಮಾಡ್ತಿದ್ದೆ. ಜನರಿಗೆ ಒಂದೊಳ್ಳೆ ಸಿನಿಮಾ ನೀಡಬೇಕೆಂದು ಈ ಚಿತ್ರ ಪ್ರಾರಂಭಿಸಿದೆ. ಅದ್ಭುತವಾದ, ವಿಶೇಷವಾದ ಸಂಜೀವಿನಿ ಗಿಡವೇ ದೇವಸಸ್ಯ. ಅದರ ಸುತ್ತ ನಡೆವ ಕಥೆಯಿದು. 30 ವರ್ಷಗಳ ಹಿಂದಿದ್ದ ಊರನ್ನು ಮರುಸೃಷ್ಠಿ ಮಾಡಿದ್ದೇವೆ. ಒಂದು ಸಸ್ಯದ ಕುರಿತಂತೆ ಮಾಡಿರುವ ಕಥೆಯಾಗಿದ್ದರಿಂದ ಎಲ್ಲಾ ಭಾಷೆಗಳಿಗೂ ಅನ್ವಯವಾಗುತ್ತೆ ಅಂತ 5 ಭಾಷೆಗೂ ಡಬ್ ಮಾಡುತ್ತಿದ್ದೇವೆ ಎಂದು ಹೇಳಿದರು.

ನಟ ಸೆಲ್ವಿನ್ ಅವರು, ಸಿನಿಮಾದಲ್ಲಿ ಆಕ್ಟ್ ಮಾಡಬೇಕೆಂದೇ ನಾನು ಬೆಂಗಳೂರಿಗೆ ಬಂದೆ. ಟ್ರ್ಯಾಕ್ಟರ್ ಓಡಿಸುತ್ತಿದ್ದೆ. ಆಗ ನಿರ್ದೇಶಕರು ಈ ಸಿನಿಮಾಗೆ ಕರೆದರು ನಂತರವೇ ಆಕ್ಷನ್ ಎಲ್ಲಾ ಕಲಿತೆ ಎಂದು ವಿವರಿಸಿದರು. ಮತ್ತೊಬ್ಬ ನಟ ಅಹನಾ ಮಾತ‌ನಾಡುತ್ತ ಇದರಲ್ಲಿ ಕುರ್ಮುಷ್ಠ ಎಂಬ ಪಾತ್ರ ಮಾಡಿದ್ದೇನೆ ಎಂದರು.

ನಾಯಕಿ ಬಿಂಬಿಕಾ ಅವರು, ಚಿತ್ರದಲ್ಲಿ ನಾನು ಮಾತಂಗಿ ಎಂಬ ಸಿದ್ದಿ ಜನಾಂಗದ ಹುಡುಗಿಯಾಗಿ ನಟಿಸಿದ್ದೇನೆ. ನಾರಾಯಣ ನಾರಾಯಣ ನಂತರ ಇದು ನನ್ನ 5ನೇ ಚಿತ್ರ ಎಂದರು. ರಾಜು ಎನ್.ಎಂ.ಅವರ ಛಾಯಾಗ್ರಹಣ, ಹರಿ ಅಜಯ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಇದನ್ನೂ ಓದಿ : ಸಾಯಿಪ್ರಕಾಶ್ ನಿರ್ದೇಶನದ ‘ಸೆಪ್ಟೆಂಬರ್ 10’ ಚಿತ್ರದ ಟೀಸರ್ ಔಟ್!

Btv Kannada
Author: Btv Kannada

Read More