ಆಸ್ತಿ ಮಾಲೀಕರಿಗೆ ಶುಭ ಸುದ್ದಿ – ಬಿ ಖಾತಾ ಬದಲಿಗೆ ಎ ಖಾತಾ ನೀಡಲು ಬಿಬಿಎಂಪಿ ಚಿಂತನೆ!

ಬೆಂಗಳೂರು : ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಅಥವಾ ರೂಪಿಸಲ್ಪಟ್ಟಿರದ ಸೈಟ್​ಗಳಿಗೆ ‘ಬಿ ಖಾತಾ’ ನೀಡುವುದನ್ನು ಬಿಬಿಎಂಪಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸುಳಿವು ನೀಡಿದ್ದಾರೆ. ಬಿ ಖಾತಾ ನೀಡುವುದರ ಬದಲಿಗೆ, ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸಿ ‘ಎ ಖಾತಾ’ ನೀಡುವ ಕುರಿತದಾ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಇದು ಜಾರಿಯಾಗಿದ್ದೇ ಆದಲ್ಲಿ ಬೆಂಗಳೂರಿನ ಆಸ್ತಿ ಮಾಲೀಕರಿಗೆ ಸಿಹಿಸುದ್ದಿಯಾಗಲಿದೆ.

ಉದ್ಯಾನವನಗಳನ್ನು ನಿರ್ಮಾಣ ಮಾಡುವುದಕ್ಕಾಗಿ ಸಣ್ಣ ಸೈಟ್​​ಗಳಿಂದ ಅವುಗಳ ಗೈಡೆನ್ಸ್ ವ್ಯಾಲ್ಯೂವಿನ ಶೇ 5 ಮತ್ತು ದೊಡ್ಡ ಸೈಟ್​​ಗಳಿಂದ ಅವುಗಳ ಗೈಡೆನ್ಸ್ ವ್ಯಾಲ್ಯೂವಿನ ಶೇ 15 ರಷ್ಟು ಮೊತ್ತವನ್ನು ಸಂಗ್ರಹಿಸುವ ಬಗ್ಗೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಮುಂದಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಬಿ ಖಾತಾ ನೀಡುವುದನ್ನು ನಿಲ್ಲಿಸುವ ಪ್ರಸ್ತಾವ ಇದೆ. ಕಟ್ಟಡ ಯೋಜನೆ ಅನುಮೋದನೆಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಪ್ರಸ್ತಾವನೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

ಪ್ರತಿ ವರ್ಷ ಸರಾಸರಿ 10,000 ಕಟ್ಟಡ ಯೋಜನೆ ಮಂಜೂರಾತಿ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಈ ಆಸ್ತಿಗಳಲ್ಲಿ 60 ಕ್ಕಿಂತ ಹೆಚ್ಚು ಬಿ ಖಾತಾ ವ್ಯಾಪ್ತಿಗೆ ಬರುತ್ತವೆ. ನಗರದ ಹಲವು ಭಾಗಗಳಲ್ಲಿ ಬಿಡಿಎ ಲೇಔಟ್​​ಗಳ ರಚನೆಯಾಗದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಪ್ರಸ್ತುತ, ಆಸ್ತಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳು, ಲೇಔಟ್‌ಗಳು ಅಥವಾ ಕಂದಾಯ ನಿವೇಶನಗನ್ನು ಬಿಬಿಎಂಪಿಯು ಬಿ ಖಾತಾ ಎಂದು ವರ್ಗೀಕರಿಸಿರುತ್ತದೆ. ನಿರ್ಮಾಣದ ಸಮಯದಲ್ಲಿ ಕಟ್ಟಡದ ಬೈಲಾಗಳನ್ನು ಉಲ್ಲಂಘಿಸುವುದು, ಕಂದಾಯ ಭೂಮಿಯಲ್ಲಿ ನಿರ್ಮಾಣ, ಅನಧಿಕೃತ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣ, ಪೂರ್ಣಗೊಳಿಸುವಿಕೆ ಅಥವಾ ವಿತರಣೆ ಪ್ರಮಾಣಪತ್ರಗಳ ಕೊರತೆ ಇತ್ಯಾದಿ ಇದ್ದಲ್ಲಿ ಬಿ ಖಾತಾ ನೀಡಲಾಗುತ್ತದೆ. ಆದರೆ, ಇಂಥ ಆಸ್ತಿಯನ್ನು ನಿರ್ದಿಷ್ಟ ನಿಯಮಗಳ ಅನುಸಾರ ದಂಡ ಪಾವತಿಸಿ ಎ ಖಾತಾಗೆ ಪರಿವರ್ತಿಸಲು ಅವಕಾಶ ನೀಡಲಾಗುತ್ತಿತ್ತು.

ಇದೀಗ ಹೊಸ ಪ್ರಸ್ತಾವನೆಯ ಪ್ರಕಾರ, ಮೊತ್ತಮೊದಲಿಗೆ ಆಸ್ತಿ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿಯೇ ಬಿ ಖಾತಾ ನೀಡದೆ ನೇರವಾಗಿ ಎ ಖಾತಾ ನೀಡುವುದಾಗಿದೆ. ಅಂದರೆ, ಆರಂಭದಲ್ಲಿಯೇ ಅಭಿವೃದ್ಧಿ ಶುಲ್ಕ ಸಂಗ್ರಹಿಸಿ ಎ ಖಾತಾ ನೀಡುವುದಾಗಿದೆ. ಇದು ಜಾರಿಗೆ ಬಂದಲ್ಲಿ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ : ಶಾಸಕ ಮುನಿರತ್ನ ಬಂಧನ ಬೇಡ – ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಮಧ್ಯಂತರ ರಕ್ಷಣೆ!

Btv Kannada
Author: Btv Kannada

Read More