ಶಾಸಕ ಮುನಿರತ್ನ ಬಂಧನ ಬೇಡ – ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಮಧ್ಯಂತರ ರಕ್ಷಣೆ!

ಬೆಂಗಳೂರು : ಮಹಿಳೆಯೊಬ್ಬರ ಮೇಲೆ ತನ್ನ ಸಹಚರರಿಂದ ಕಣ್ಣೆದುರೇ ಅತ್ಯಾಚಾರ ಮಾಡಿಸಿದ ಆರೋಪ ಸಂಬಂಧ ದಾಖಲಾಗಿರುವ ಪ್ರಕರಣದ ಮೊದಲ ಆರೋಪಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಜೂನ್‌ 3ರವರೆಗೆ ಬಂಧಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಮಧ್ಯಂತರ ರಕ್ಷಣೆ ನೀಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಪ್ರಕರಣದ ವಿಚಾರಣೆ ನಡೆಸಿದರು. ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸಿ ಎಸ್‌ ಪ್ರದೀಪ್ ಅವರು “ಆರೋಪಿ ಮುನಿರತ್ನ ಸಂತ್ರಸ್ತೆಗೆ ಬೆದರಿಕೆ ಒಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಕೇಸ್ ಡೈರಿ ಹಾಗೂ ಇತರೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಮಯಾವಕಾಶ ನೀಡಬೇಕು” ಎಂದು ಕೋರಿದರು.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮುನಿರತ್ನ ಪರ ವಕೀಲ ಎಸ್‌ ಎಸ್ ಶ್ರೀನಿವಾಸ ರಾವ್‌ ಹಾಗೂ ಉಳಿದ ಆರೋಪಿಗಳ ಪರ ಹಿರಿಯ ವಕೀಲ ಎಸ್‌ ಶ್ಯಾಮಸುಂದರ್ ಅವರು “ಮಧ್ಯಂತರ ಜಾಮೀನು ಅರ್ಜಿಯನ್ನು ಈಗಲೇ ಪರಿಗಣಿಸಬೇಕು” ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.

ಸಂತ್ರಸ್ತೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರು “ಸಿಆರ್‌ಪಿಸಿ ಸೆಕ್ಷನ್‌ 438 (1)(4)ರ ಅಡಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ಪ್ರಾಸಿಕ್ಯೂಟರ್‌ಗೆ ನೋಟಿಸ್ ನೀಡುವ ಪೂರ್ವದಲ್ಲಿ ನ್ಯಾಯಾಲಯ ಮಧ್ಯಂತರ ಆದೇಶ ನೀಡಬಹುದಾಗಿದೆ. ಪ್ರಾಸಿಕ್ಯೂಟರ್‌ಗೆ ನೋಟಿಸ್ ನೀಡಿದ ಬಳಿಕ ಮಧ್ಯಂತರ ಆದೇಶ ಮಾಡಲು ಕಾನೂನು ಅನುಮತಿಸುವುದಿಲ್ಲ” ಎಂದರು.

ವಾದ–ಪ್ರತಿವಾದ ಆಲಿಸಿದ ಪೀಠವು “ಆರೋಪಿಗಳು ತನಿಖೆಗೆ ಸಹಕರಿಸುವುದಾದರೆ ಅವರನ್ನು ಬಂಧಿಸುವುದಿಲ್ಲ” ಎಂಬ ಪ್ರಾಸಿಕ್ಯೂಷನ್‌ ಹೇಳಿಕೆ ಪರಿಗಣಿಸಿ “ಜೂನ್‌ 3ರವರೆಗೆ ಆರೋಪಿಗಳನ್ನು ಬಂಧಿಸಬಾರದು” ಎಂದು ಮಧ್ಯಂತರ ರಕ್ಷಣೆ ನೀಡಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ : IPL ಫೈನಲ್ ಪಂದ್ಯಕ್ಕೆ ಕೌಂಟ್​ಡೌನ್.. ಟ್ರೋಫಿ ಗೆದ್ದ ತಂಡಕ್ಕೆ ಸಿಗೋ ಬಹುಮಾನ ಮೊತ್ತವೆಷ್ಟು ಗೊತ್ತಾ?

Btv Kannada
Author: Btv Kannada

Read More