ಬೆಳಗಾವಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಆಯಿಲ್ ತುಂಬಿದ ಟ್ಯಾಂಕರ್ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್‌ನಲ್ಲಿ ನಡೆದಿದೆ.
ಟ್ಯಾಂಕರ್‌ನ ಜಾಯಿಂಟ್ ಕಟ್ ಆಗಿ ನಿಯಂತ್ರಣ ತಪ್ಪಿದೆ. ಆಗ ಹೈವೇ ಮಧ್ಯದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆರಗಿದ ಟ್ಯಾಂಕರ್ ಪಲ್ಟಿಯಾಗಿದೆ. ಸಾವಿಂದ ತಪ್ಪಿಸಿಕೊಳ್ಳಲು ಕಾರ್ಮಿಕರು ಹೆಣಗಾಡಿದ್ದು, ರಸ್ತೆಯುದ್ದಕ್ಕೂ ದೇಹಗಳು ಛಿದ್ರ ಛಿದ್ರವಾಗಿವೆ.
ಕಲಬುರಗಿಯಿಂದ ಕೆಲಸಕ್ಕೆಂದು ಬೆಳಗಾವಿಗೆ ಬಂದಿದ್ದ ಕಾರ್ಮಿಕರು ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ರಿಪೇರಿ ಮಾಡುತ್ತಿದ್ದರು. ಈ ವೇಳೆ ಟ್ಯಾಂಕರ್ ಹರಿದಿದ್ದು, ಅಪಘಾತದಲ್ಲಿ ಕಲಬುರಗಿ ಜಿಲ್ಲೆಯ ರಾಮನ್ನ, ಮಹೇಶ್, ರಾಮಚಂದ್ರ ಎಂಬುವವರು ಮೃತಪಟ್ಟಿದ್ದಾರೆ. ಲಕ್ಷ್ಮೀಬಾಯಿ, ಅನುಶ್ರೀ, ಭೀಮಾಬಾಯಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಭೀಮಾಬಾಯಿಯ ಎರಡು ಕಾಲುಗಳು ಕಟ್ ಆಗಿದ್ದು, ಚಿಕಿತ್ಸೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಆಯಿಲ್ ತುಂಬಿದ್ದ ಟ್ಯಾಂಕರ್ ಕಾಮಿಕರ ಮೇಲೆ ಹರಿದು ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್‌ನಲ್ಲಿ ಸಿಲುಕಿದ್ದ ಚಾಲಕನನ್ನು ಪೊಲೀಸರು ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಮಯೂರ್ ಕಡಿ ನಿರ್ದೇಶನದ ‘ಮಾತೊಂದ ಹೇಳುವೆ’ ಚಿತ್ರ ಜೂ.20ಕ್ಕೆ ರಿಲೀಸ್!
