ಬೆಂಗಳೂರು : ಇತ್ತೀಚಿಗೆ ಮಂಡ್ಯದಲ್ಲಿ ಸಂಚಾರ ಪೊಲೀಸರ ವಾಹನ ತಪಾಸಣೆ ವೇಳೆ ಮೂರು ವರ್ಷದ ಮಗುವೊಂದು ರಸ್ತೆಗೆ ಬಿದ್ದು ಸಾವನ್ನಪ್ಪಿತ್ತು. ಈ ಹಿನ್ನೆಲೆ ಸಂಚಾರ ಪೊಲೀಸರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ ಸಲೀಂ ಅವರು ಖಡಕ್ ಸೂಚನೆ ನೀಡಿದ್ದಾರೆ.
ಮಂಡ್ಯ ಘಟನೆಯಲ್ಲಿ ಪೊಲೀಸರ ಬೇಜವಾಬ್ದಾರಿ ವರ್ತನೆಯನ್ನು ಸಾರ್ವಜನಿಕರು ಖಂಡಿಸಿದ್ದು, ಮೂವರು ಸಹಾಯಕ ಉಪನಿರೀಕ್ಷಕರನ್ನು (ಎಎಸ್‌ಐ) ಅಮಾನತುಗೊಳಿಸಲಾಗಿತ್ತು. ಇದೀಗ ಘಟನೆಯಲ್ಲಿ ಪೊಲೀಸರ ತಪ್ಪು ಬಯಲಾಗಿದ್ದು, ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ.
- ರಸ್ತೆಯಲ್ಲಿ ದಿಢೀರ್ ಅಡ್ಡ ಬಂದು ವಾಹನಗಳನ್ನು ನಿಲ್ಲಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಕಾರಣವಿಲ್ಲದೆ ವಾಹನಗಳನ್ನು ತಡೆದು ತಪಾಸಣೆ ಮಾಡುವಂತಿಲ್ಲ. ಕಣ್ಣಿಗೆ ಕಾಣುವ ನಿಯಮ ಉಲ್ಲಂಘನೆಗಳು (ಉದಾಹರಣೆಗೆ ಹೆಲ್ಮೆಟ್ ಧರಿಸದಿರುವುದು, ಸಂಚಾರ ಸಂಕೇತ ಉಲ್ಲಂಘನೆ) ಕಂಡುಬಂದಾಗ ಮಾತ್ರ ವಾಹನಗಳನ್ನು ನಿಲ್ಲಿಸಬೇಕು.
- ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಜಿಗ್‌ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳನ್ನು ತಡೆಯುವಂತಿಲ್ಲ.
- ಬೈಕ್‌ನ ಹಿಂಬದಿ ಸವಾರರನ್ನು ಹಿಡಿದು ಎಳೆಯುವಂತಿಲ್ಲ.
- ವಾಹನಗಳ ಕೀಲಿಯನ್ನು ತೆಗೆದುಕೊಳ್ಳುವಂತಿಲ್ಲ.
- ವೇಗವಾಗಿ ಚಲಿಸುವ ವಾಹನಗಳನ್ನು ಬೆನ್ನಟ್ಟುವ ಬದಲು, ವಾಹನದ ನೋಂದಣಿ ಸಂಖ್ಯೆಯನ್ನು ಗುರುತಿಸಿ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಬೇಕು.
ಸುರಕ್ಷತಾ ಸಾಧನಗಳ ಬಳಕೆ:
- ತಪಾಸಣೆ ವೇಳೆ ಸಂಚಾರ ಪೊಲೀಸರು ಕಡ್ಡಾಯವಾಗಿ ರಿಫ್ಲೆಕ್ಟಿವ್ ಜಾಕೆಟ್ ಧರಿಸಿರಬೇಕು.
- ರಾತ್ರಿ ವೇಳೆ LED ಬ್ಯಾಟನ್‌ಗಳನ್ನು ಉಪಯೋಗಿಸುವುದು ಅವಶ್ಯಕ.
- ಬಾಡಿ ವಾರ್ನ್ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಧರಿಸಿ, ತಪಾಸಣೆ ಪ್ರಕ್ರಿಯೆಯನ್ನು ದಾಖಲಿಸಬೇಕು.
ತಂತ್ರಜ್ಞಾನ ಆಧಾರಿತ ಕ್ರಮ:
- ಪ್ರಕರಣಗಳನ್ನು ಐಟಿಎಂಎಸ್ (ಸಂಪರ್ಕರಹಿತ ಘಟಕಗಳ ಮೂಲಕ) ಮತ್ತು ಕ್ಯಾಮೆರಾ ಮೂಲಕವೇ ದಾಖಲಿಸಬೇಕು.
- ಅತಿ-ವೇಗದ ವಾಹನಗಳ ವಿರುದ್ಧ ಎಫ್.ಟಿ.ವಿ.ಆರ್ (ತಂತ್ರಜ್ಞಾನ ಆಧಾರಿತ ನಿಯಮ) ಅನುಸರಿಸಬೇಕು.
- ವಾಹನಗಳ ವೇಗವನ್ನು ಕಡಿಮೆ ಮಾಡಲು 150 ಮೀಟರ್ ದೂರದಿಂದಲೇ ರಿಫ್ಲೆಕ್ಟಿವ್ ಸಂಕೇತಗಳನ್ನು ಅಳವಡಿಸಬೇಕು.
ರಾತ್ರಿ ತಪಾಸಣೆ ಮಾರ್ಗಸೂಚಿ: ರಾತ್ರಿ ವೇಳೆ ಸಂಚಾರ ಸಿಗ್ನಲ್ ಜಂಕ್ಷನ್‌ಗಳ ಬಳಿಯೇ ವಾಹನ ತಪಾಸಣೆ ನಡೆಸಬೇಕು. ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಹೆದ್ದಾರಿಗಳಲ್ಲಿ ನಾಕಾಬಂಧಿ ಪ್ರಕ್ರಿಯೆಗಳನ್ನು ನಡೆಸಬಾರದು. ತಪಾಸಣೆಗೆ ಸಂಚಾರ ಪೊಲೀಸರ ಸಹಕಾರ ಪಡೆಯುವುದು ಕಡ್ಡಾಯ.
ಜಾಗೃತಿ ಕಾರ್ಯಕ್ರಮ: ಅನಾಹುತಗಳನ್ನು ತಪ್ಪಿಸಲು ಸಂಚಾರ ನಿಯಮಗಳ ಪಾಲನೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಡಿಜಿಪಿ ಎಂ.ಎ. ಸಲೀಂ ಅವರು, ಈ ಸುತ್ತೋಲೆಯಲ್ಲಿ ತಿಳಿಸಲಾದ ಎಲ್ಲಾ ಅಂಶಗಳನ್ನು ಸಂಚಾರ ಪೊಲೀಸರು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದ್ದಾರೆ. ಈ ಮಾರ್ಗಸೂಚಿಗಳ ಉಲ್ಲಂಘನೆಯು ಗಂಭೀರ ಕ್ರಮಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : ಮಿಸ್ ಥಾಯ್ಲೆಂಡ್ ಓಪಲ್ ಸುಚಾಟಾಗೆ ‘Miss World 2025’ ಕಿರೀಟ!

Author: Btv Kannada
Post Views: 258