ಶ್ರೀರಾಮಚಂದ್ರಾಪುರ ಮಠದಿಂದ ಆರು ಗಣ್ಯರಿಗೆ ಪ್ರಶಸ್ತಿ ಪ್ರದಾನ!

ಗೋಕರ್ಣ : ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ಅಹಲ್ಯಾ ಶರ್ಮಾ, ಶ್ರೀಕ್ಷೇತ್ರ ಶಕಟಪುರಂ ಶ್ರೀವಿದ್ಯಾಪೀಠಂನ ಆಸ್ಥಾನ ವಿದ್ವಾಂಸರಾದ ಮಧುಸೂಧನ ಶಾಸ್ತ್ರೀ ಹಂಪಿಹೊಳಿ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಶುಕ್ರವಾರ ಶ್ರೀರಾಮಚಂದ್ರಾಪುರ ಮಠದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ಆರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಶ್ರೀಕ್ಷೇತ್ರ ಶಕಟಪುರಂ ಶ್ರೀವಿದ್ಯಾಪೀಠಂನ ಆಸ್ಥಾನ ವಿದ್ವಾಂಸರಾದ ಮಧುಸೂಧನ ಶಾಸ್ತ್ರೀ ಹಂಪಿಹೊಳಿ ಅವರಿಗೆ ಶಂಕರ ಕಿಂಕರ ಪ್ರಶಸ್ತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ಅಹಲ್ಯಾ ಶರ್ಮಾ ಮತ್ತು ಗುರುಸೇವೆಯಲ್ಲಿ ಸಾರ್ಥಕತೆ ಕಂಡ ದಿವಂಗತ ಮಹಾಲಕ್ಷ್ಮೀ ತಿಮ್ಮಪ್ಪ ಅವರಿಗೆ ಶ್ರೀಮಾತಾ ಪ್ರಶಸ್ತಿ, ಪ್ರಸಿದ್ಧ ಜ್ಯೌತಿಷ ವಿದ್ವಾಂಸ ಗೋಪಾಲಕೃಷ್ಣ ಭಟ್ಟ ಹಂಡ್ರಮನೆಯವರಿಗೆ ಪಾಂಡಿತ್ಯ ಪುರಸ್ಕಾರ, ದಿವಂಗತ ಮೂಗಿಮನೆ ಗಣಪತಿ ಹೆಗಡೆಯವರಿಗೆ ಪುರುಷೋತ್ತಮ ಪ್ರಶಸ್ತಿ, ಸಾಗರದ ಸಮಾಜಸೇವಕ ಪಿ.ಡಿ.ಶ್ರೀಧರರಾವ್ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಾಲಕ್ಷ್ಮೀ ತಿಮ್ಮಪ್ಪ ಪರವಾಗಿ ಪುತ್ರ ಸಂತೋಷ್ ಹೆಗಡೆ ಮತ್ತು ಮೂಗಿಮನೆ ಗಣಪತಿ ಹೆಗಡೆ ಪರವಾಗಿ ಪುತ್ರ ಸುಶಿತ್ ಸುಬ್ರಹ್ಮಣ್ಯ ಪ್ರಶಸ್ತಿ ಸ್ವೀಕರಿಸಿದರು.

ಪಾಂಡಿತ್ಯದ ಮೂಲಕ ಸನಾತನೆಯನ್ನು ಸಂರಕ್ಷಿಸಿದ ಮಹತ್ವಕ್ಕೆ ಸಾರ್ಥಕ ಗೌರವವಾಗಿ ಪಾಂಡಿತ್ಯ ಪುರಸ್ಕಾರ, ಶ್ರೀಶಂಕರ ಭಗವತ್ಪಾದರ ಜೀವನ ಸಂದೇಶಗಳ ಪ್ರಸಾರಕ್ಕೆ ಕಟಿಬದ್ಧರಾದ ಅನುಪಮತೆಗೆ ಶಂಕರ ಕಿಂಕರ ಪ್ರಶಸ್ತಿ, ಲೋಕದ ಒಳಿತಿಗಾಗಿ ಪರಿಶ್ರಮಿಸಿದ ಹಿರಿತನಕ್ಕೆ ಸಾರ್ಥಕ ಗೌರವವಾಗಿ ಪುರುಷೋತ್ತಮ ಪ್ರಶಸ್ತಿ, ಸತ್ಕಾರ್ಯಗಳ ಮೂಲಕ ಸಮೂಹಕ್ಕೆ ಮಮತೆ ಉಣಿಸಿದ ಸಂವೇದನೆಗೆ ಸಾರ್ಥಕ ಗೌರವವಾಗಿ ಶ್ರೀಮಾತಾ ಪ್ರಶಸ್ತಿ, ಸಮಾಜೋದ್ಧಾರಕ್ಕೆ ಕೊಟ್ಟ ವಿಶಿಷ್ಟ ಕೊಡುಗೆಗೆ ಸಾರ್ಥಕ ಗೌರವವಾಗಿ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಹುಶ್ರುತ ವಿದ್ವಾಂಸರು ಮತ್ತು ಉತ್ತಮ ವಾಗ್ಮಿಗಳಾದ ಮಧುಸೂದನ ಶಾಸ್ತ್ರೀ ಹಂಪಿಹೊಳಿಯವರು ಬೆಳಗಾವಿ ತಾಲೂಕಿನ ರಾಮದುರ್ಗದ ಹಂಪಿಹೊಳಿಯವರು. ಋಗ್ವೇದ, ಯಾಜ್ಞಿಕ, ಜ್ಯೌತಿಷ, ನ್ಯಾಯ, ವೇದಾಂತಗಳ ಅಧ್ಯಯನ ನಡೆಸಿದವರು. ಡಾ.ಎಸ್.ಅಹಲ್ಯಾ ಶರ್ಮಾ ಸಂಸ್ಕøತ ಹಾಗೂ ಆಯುರ್ವೇದ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದವರು.

ಪದ್ಮಪ್ರಶಸ್ತಿಗಳ ಪ್ರದಾನ ಸಮಾರಂಭದ ಮಾದರಿಯಲ್ಲಿ ನಡೆದ ಸಮಾರಂಭದಲ್ಲಿ ಆಶೀರ್ವಚನ, ಭಾಷಣಗಳು ಕೂಡಾ ಇರದೇ ಸಮಾರಂಭ ವಿಶಿಷ್ಟವಾಗಿ ನಡೆದು, ಗುರುವಂದನೆ, ಸ್ವಾಗತಗೀತೆ, ಪ್ರಶಸ್ತಿ ಪುರಸ್ಕೃತರ ಕಿರುಪರಿಚಯದ ಧ್ವನಿಮುದ್ರಿಕೆ, ವೇದಘೋಷವಷ್ಟೇ ಕಾರ್ಯಕ್ರಮದ ಭಾಗವಾಗಿತ್ತು.

ಶ್ರೀಮಠದ ಸಿಓಓ ಸಂತೋಷ್ ಹೆಗಡೆ, ಸಿಎಫ್‍ಓ ಜೆ.ಎಲ್.ಗಣೇಶ್, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉತ್ಸವ ಖಂಡದ ಶ್ರೀಸಂಯೋಜಕರಾದ ರಾಘವೇಂದ್ರ ಮಧ್ಯಸ್ಥ, ಶಾಂತಾರಾಮ ಹೆಗಡೆ, ಶ್ರೀಕಾರ್ಯದರ್ಶಿ ಮಧು ಜಿ.ಕೆ, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪ್ಪು, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಸತ್ಯನಾರಾಯಣ ಶರ್ಮಾ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹಗಡೆ, ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ವಿವಿಧ ಮಂಡಲಗಳ ಅಧ್ಯಕ್ಷರಾದ ಮುರಳಿ ಗೀಜಗಾರ್, ಸುಬ್ರಾಯ ಭಟ್, ಆರ್.ಜಿ.ಹೆಗಡೆ, ಮಹೇಶ್ ಚಟ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾಗೆ ಎಡಿಜಿಪಿಯಾಗಿ ಬಡ್ತಿ – ರಾಜ್ಯ ಸರ್ಕಾರ ಆದೇಶ!

Btv Kannada
Author: Btv Kannada

Read More