ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ವಿರುದ್ಧ ಭುಗಿಲೆದ್ದ ಆಕ್ರೋಶ – ತುಮಕೂರಲ್ಲಿ 144 ಸೆಕ್ಷನ್ ಜಾರಿ!

ತುಮಕೂರು : ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ತುಮಕೂರು ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, 144 ಸೆಕ್ಷನ್ ಜಾರಿಯ ನಡುವೆಯೂ ರೈತ ಸಂಘಟನೆ, ಬಿಜೆಪಿ-ಜೆಡಿಎಸ್​ ನಾಯಕರು ಸೇರಿ ಸಾವಿರಾರು ಮಂದಿ ಹೋರಾಟ ನಡೆಸುತ್ತಿದ್ದಾರೆ.

ಸುಂಕಾಪುರ ನಾಲೆ ಬಳಿಯ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದೆ. 144 ಸೆಕ್ಷನ್ ವ್ಯಾಪ್ತಿಯ ಒಳಗೆ ಹಾಗೂ ಹೊರಗೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ನಿಟ್ಟೂರಿನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನೂರಾರು ರೈತರು, ಬಿಜೆಪಿ ಮುಖಂಡರು ಜಮಾಯಿಸಿದ್ದರು. 144 ಸೆಕ್ಷನ್ ಜಾರಿ ನಡುವೆಯೂ ಪ್ರತಿಭಟನೆ ನಡೆಸಿದ್ದಕ್ಕೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಬಿಜೆಪಿ ಶಾಸಕ ಸುರೇಶ್ ಗೌಡ, ಜ್ಯೋತಿ ಗಣೇಶ್, ಜಿಲ್ಲಾಧ್ಯಕ್ಷ ರವಿಶಂಕರ್, ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದೆ. ಸರ್ಕಾರ ತುಮಕೂರು ರೈತರ ನೀರಾವರಿ ಹೋರಾಟವನ್ನು ಹತ್ತಿಕ್ಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟಗಾರರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ನೀರಾವರಿ ಹೋರಾಟಕ್ಕೆ ಕಾರಣವೇನು? ಈ ಯೋಜನೆಗೆ ತುಮಕೂರು ಜಿಲ್ಲೆಯ ರಾಜಕಾರಣಿಗಳು, ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಏನಂದ್ರೆ ಗೊರೂರು ಡ್ಯಾಂನಿಂದ ವರ್ಷಕ್ಕೆ 24 TMC ನೀರನ್ನು ತುಮಕೂರು ಜಿಲ್ಲೆಗೆ ಹರಿಸಬೇಕೆಂದು ರಾಜ್ಯ ಸರ್ಕಾರ ನೀರು ಹಂಚಿಕೆ ಮಾಡಿದೆ. ಈಗ ಮಾಗಡಿ ತಾಲ್ಲೂಕಿಗೆ ಪ್ರತ್ಯೇಕವಾಗಿ ಹೊಸದಾಗಿ ನೀರು ಹಂಚಿಕೆ ಮಾಡಿಸಿಕೊಳ್ಳದೇ 0.75 ಟಿಎಂಸಿ ನೀರನ್ನು ಹರಿಸಲು ಪೈಪ್‌ಲೇನ್ ಕಾಮಗಾರಿ ನಡೆಸಲಾಗುತ್ತಿದೆ ಅನ್ನೋದು ತುಮಕೂರು ಜಿಲ್ಲೆಯ ರಾಜಕಾರಣಿಗಳ ಆಕ್ಷೇಪ.

ಇದರ ಜೊತೆಗೆ ನೈಸರ್ಗಿಕವಾಗಿ ನಾಲೆಯ ಮೂಲಕವೇ ಕುಣಿಗಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗಬಹುದಿತ್ತು. ಇದರ ಬದಲು ಸ್ಟೀಲ್ ಪೈಪ್‌ಗಳನ್ನು ಹಾಕಿ ಮಾಗಡಿಗೆ ಹೇಮಾವತಿ ನೀರು ಹರಿಸಿದರೆ ಕುಣಿಗಲ್ ತಾಲ್ಲೂಕಿಗೆ ನೀರು ಸಿಗದಂತಾಗುತ್ತೆ. ತುಮಕೂರು ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ನೀರು ಕಡಿಮೆಯಾಗುತ್ತೆ ಎಂಬ ಆತಂಕ ತುಮಕೂರು ಜಿಲ್ಲೆಯ ರಾಜಕಾರಣಿಗಳದ್ದು. ತುಮಕೂರು ಜಿಲ್ಲೆಗೆ ವರ್ಷಕ್ಕೆ 24 ಟಿಎಂಸಿ ಹೇಮಾವತಿ ನೀರು ಹಂಚಿಕೆಯಾಗಿದ್ದರೂ, ಇದುವರೆಗೂ ಯಾವ ವರ್ಷವೂ ಕೂಡ 24 ಟಿಎಂಸಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಹರಿದೇ ಇಲ್ಲ. ತುಮಕೂರು ಜಿಲ್ಲೆಯ ಕೆರೆಕಟ್ಟೆಗಳಿಗೆ, ಕುಡಿಯುವ ಉದ್ದೇಶಕ್ಕೆ ಕೃಷಿ ಉದ್ದೇಶಕ್ಕೆ ಹೇಮಾವತಿ ನೀರನ್ನು ಬಳಕೆ ಮಾಡಲಾಗುತ್ತೆ.

ತುಮಕೂರು ನಗರ, ಪಟ್ಟಣಗಳಿಗೂ ಕುಡಿಯುವ ಉದ್ದೇಶಕ್ಕೆ ಹೇಮಾವತಿ ನೀರುನ್ನು ಬಳಕೆ ಮಾಡಲಾಗುತ್ತೆ. ಗೊರೂರು ಡ್ಯಾಂ ನೀರನ್ನು ತುಮಕೂರು ನಗರದ ಬಳಿಯ ಬುಗುಡನಹಳ್ಳಿ ಕೆರೆಗೆ ಹರಿಸಿ, ಅಲ್ಲಿಂದ ಪೈಪ್ ಮೂಲಕ ತುಮಕೂರು ನಗರಕ್ಕೆ ಪೂರೈಸಲಾಗುತ್ತಿದೆ. ಇದೇ ರೀತಿ ಮಧುಗಿರಿ, ಶಿರಾ ಪಟ್ಟಣಗಳಿಗೂ ಕೆರೆಗಳಿಗೆ ನೀರು ತುಂಬಿಸಿ ಹೇಮಾವತಿ ನೀರನ್ನು ಕುಡಿಯಲು ಪೂರೈಸಲಾಗುತ್ತಿದೆ. ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ತಾಲ್ಲೂಕುಗಳು ಕೂಡ ಹೇಮಾವತಿ ನೀರನ್ನು ಕುಡಿಯುವ ನೀರು, ಕೃಷಿ ಉದ್ದೇಶಕ್ಕೆ ಅವಲಂಬಿಸಿವೆ. ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರಿನ ಮೂಲ ಬಿಟ್ಟರೇ, ಬೇರೆ ನದಿ ನೀರಿನ ಮೂಲಗಳಿಲ್ಲ.

ತುಮಕೂರು ಜಿಲ್ಲೆಗೆ ಹೇಮಾವತಿಯ ಜೀವ ನದಿ. ಹೀಗಾಗಿ ತುಮಕೂರು ಜಿಲ್ಲೆಯ ಜನರು, ರಾಜಕಾರಣಿಗಳು ಪ್ರಾಣ ಬಿಟ್ಟೆವು ಹೇಮಾವತಿ ನೀರು ಕೊಡಲ್ಲ ಎಂದು ಧರಣಿ, ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಮಾಗಡಿ ತಾಲ್ಲೂಕಿನ ರಾಜಕಾರಣಿಗಳು ಹೇಳುವ ಪ್ರಕಾರ, ಮಾಗಡಿ ತಾಲ್ಲೂಕಿನ ಶ್ರೀರಂಗ ಏತ ನೀರಾವರಿ ಯೋಜನೆಗೆ ಹೇಮಾವತಿಯ 0.75 ಟಿಎಂಸಿ ನೀರು ಹಂಚಿಕೆಯಾಗಿದೆ. ಹಂಚಿಕೆಯಾಗಿರುವ ನೀರು ಅನ್ನು ಗುಬ್ಬಿ ತಾಲ್ಲೂಕು, ಕುಣಿಗಲ್ ತಾಲ್ಲೂಕು ಮೂಲಕ ಪಕ್ಕದ ಮಾಗಡಿ ತಾಲ್ಲೂಕಿಗೆ ಸ್ಟೀಲ್ ಪೈಪ್ ಲೇನ್ ಮೂಲಕ ಹರಿಸುವ ಯೋಜನೆ ಮಾಡಲಾಗಿದೆ.

ಇದನ್ನೂ ಓದಿ : ರಾಜ್ಯದ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಏಕಕಾಲಕ್ಕೆ ಹಲವು ಜಿಲ್ಲೆಗಳಲ್ಲಿ ರೇಡ್​​!

Btv Kannada
Author: Btv Kannada

Read More