ಬೆಂಗಳೂರು : ಐಪಿಎಲ್ ಪಂದ್ಯಗಳ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಪೊಲೀಸರ ಪಾತ್ರವಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದ್ದು, ಇಬ್ಬರು ಕಾನ್ಸ್ಟೇಬಲ್ಗಳನ್ನು ಸಸ್ಪೆಂಡ್ ಮಾಡಲಾಗಿದೆ.
ನಗರ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್ ವೆಂಕಟಗಿರಿಗೌಡ ಮತ್ತು ಹಲಸೂರು ಸಂಚಾರ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ರವಿಚಂದ್ರ ಅವರನ್ನು ಅಮಾನತು ಮಾಡಿ, ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಆದೇಶ ಹೊರಡಿಸಿದ್ದಾರೆ.
ಮೇ 17ರಂದು ವಿಜಯನಗರದ ಬಳಿ ಆರೋಪಿಗಳಾದ ಶಂಕರ್ ಹಾಗೂ ಸುರೇಶ್ ಅವರು ಐಪಿಎಲ್ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ₹1,200 ಮೌಲ್ಯದ ಟಿಕೆಟ್ ಅನ್ನು 5,000ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಟಿಕೆಟ್ ಖರೀದಿಸುವ ನೆಪದಲ್ಲಿ ಕಾರ್ಯಾಚರಣೆ ನಡೆಸಿದ್ದ ಗೋವಿಂದರಾಜ ನಗರ ಠಾಣೆಯ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು. ಆರೋಪಿಗಳ ವಿಚಾರಣೆ ನಡೆಸಿದಾಗ ಪೊಲೀಸ್ ಸಿಬ್ಬಂದಿಯ ಕೈವಾಡ ಇರುವುದು ಪತ್ತೆಯಾಗಿತ್ತು.
ಆರೋಪಿಗಳಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಟಿಕೆಟ್ ನೀಡಿದ್ದ ಆರೋಪದ ಮೇರೆಗೆ ವೆಂಕಟಗಿರಿಗೌಡ ಮತ್ತು ರವಿಚಂದ್ರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ತನಿಖೆಯ ವೇಳೆ ಲಭಿಸಿದ ಮಾಹಿತಿ ಆಧರಿಸಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಇಬ್ಬರನ್ನೂ ಅಮಾನತು ಮಾಡಲಾಗಿದೆ. ಆರೋಪಿಗಳಾದ ಸುರೇಶ್ ಹಾಗೂ ಶಂಕರ್ ಅವರು 1,200 ಮುಖಬೆಲೆಯ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ 5 ಸಾವಿರಕ್ಕೆ ಹಾಗೂ 4,290 ಮುಖಬೆಲೆಯ ಟಿಕೆಟ್‌ಗಳನ್ನು 6,500 ಮಾರಾಟ ಮಾಡಿದ್ದರು. ಇದರಿಂದ ಬರುತ್ತಿದ್ದ ಲಾಭದಲ್ಲಿ ವೆಂಕಟಗಿರಿಗೌಡ ಮತ್ತು ರವಿಚಂದ್ರ ಅವರಿಗೂ ಪಾಲು ನೀಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಸದ್ಯ ಅಮಾನತುಗೊಂಡಿರುವ ಕಾನ್ಸ್ಟೇಬಲ್ಗಳು ಎಲ್ಲಿಂದ ಟಿಕೆಟ್ ತಂದು ಆರೋಪಿಗಳಿಗೆ ನೀಡುತ್ತಿದ್ದರು ಎಂಬುದನ್ನು ಪತ್ತೆ ಮಾಡಲು ತನಿಖೆ ಮುಂದುವರೆಸಲಾಗಿದೆ. ಕಾನ್ಸ್ಟೇಬಲ್ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಜುಲೈನಿಂದ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ!
