ಬೆಂಗಳೂರು : ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಸಂಘಟನಾ ಹೋರಾಟಗಾರರು, ರಾಜಕಾರಣಿಗಳು ಸೇರಿದಂತೆ 43 ಪ್ರಕರಣಗಳನ್ನು ಅಕ್ಟೋಬರ್ 10, 2024 ರಂದು ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಗಿರೀಶ್ ಭಾರದ್ವಾಜ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸಿಜೆ ಎನ್.ವಿ.ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ ಅವರಿದ್ದ ಹೈಕೋರ್ಟ್ ದ್ವಿಸದಸ್ಯ ಪೀಠ ಇಂದು ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. 43 ಕ್ರಿಮಿನಲ್ ಕೇಸ್ ಹಿಂಪಡೆಯುವ ಸರ್ಕಾರದ ಕ್ರಮಕ್ಕೆ ಈಗ ಭಾರೀ ಹಿನ್ನಡೆಯಾಗಿದೆ.
ಏನಿದು ಹುಬ್ಬಳ್ಳಿ ಗಲಭೆ ಪ್ರಕರಣ?
ಏಪ್ರಿಲ್ 16, 2022 ರಂದು ಯುವಕನೊಬ್ಬ ವಿವಾದಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಗಲಭೆ ನಡೆದು ಉದ್ರಿಕ್ತರು ಹಳೆ ಹುಬ್ಬಳ್ಳಿ ಠಾಣೆ ಎದುರು ಪೊಲೀಸರು ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಸಂಬಂಧ 11 ಎಫ್‌ಐಆರ್ ದಾಖಲಾಗಿ 155 ಮದಿ ಮೇಲೆ ಕೇಸ್ ದಾಖಲಾಗಿತ್ತು. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಪೊಲೀಸ್ ವಾಹನಗಳಿಗೆ ಹಾನಿಯಾಗಿದ್ದರೆ ಇಬ್ಬರು ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದರು.
ಸೆಪ್ಟೆಂಬರ್ 2024 ಎಲ್ಲಾ ಜಿಲ್ಲೆಗಳ ಎಸ್ಪಿ, ಕಮೀಷನರ್ ಗಳಿಗೆ ಪತ್ರ ಬರೆದಿದ್ದ ಡಿಜಿ-ಐಜಿ ನಿಮ್ಮ ಜಿಲ್ಲೆಗಳಲ್ಲಿ ಕೇಸ್ ವಾಪಸ್ ಪಡೆಯುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹುಬ್ಬಳ್ಳಿ ಗಲಭೆಯಲ್ಲಿ ದಾಖಲಾಗಿದ್ದವರ ಮೇಲಿನ ಪ್ರಕರಣವನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದರಿಂದ ವಿಪಕ್ಷ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಆದರೂ ಸರ್ಕಾರ ಕೇಸ್ ವಾಪಸ್ ಪಡೆದುಕೊಂಡು ಆದೇಶ ಹೊರಡಿಸಿತ್ತು.
ಇದನ್ನೂ ಓದಿ : ‘ಕಾಲೇಜ್ ಕಲಾವಿದ’ ಟ್ರೇಲರ್ ಬಿಡುಗಡೆ ಮಾಡಿದ ಖಳನಟ ಕೋಟೆ ಪ್ರಭಾಕರ್ – ಜೂನ್ 6ಕ್ಕೆ ರಾಜ್ಯಾದ್ಯಂತ ಸಿನಿಮಾ ತೆರೆಗೆ!
