ಮಾಗಡಿ, ರಾಮನಗರ ಮತ್ತು ಕನಕಪುರಕ್ಕೆ ಹೇಮಾವತಿ ನೀರು – ಕೇಂದ್ರ ಸಚಿವ ಸೋಮಣ್ಣ ತೀವ್ರ ಆಕ್ರೋಶ!

ತುಮಕೂರು : ತುಮಕೂರು ಜಿಲ್ಲೆಯ ರೈತರಿಗೆ ಬದುಕು ಕಟ್ಟಿಕೊಟ್ಟ ಹೇಮಾವತಿ ನೀರನ್ನು ಮಾಗಡಿ, ರಾಮನಗರ ಮತ್ತು ಕನಕಪುರಕ್ಕೆ ಹರಿಸಿಕೊಳ್ಳಲು ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ವಿವಾದಿತ ಹೇಮಾವತಿ ಎಕ್ಸ್​ಪ್ರೆಸ್ ಲಿಂಕ್ ಕೆನಾಲ್ ಪೀಡರ್ ಯೋಜನೆಯಿಂದ ತುಮಕೂರು ಭಾಗದ ರೈತರಿಗಾಗುವ ಅನ್ಯಾಯದ ಬಗ್ಗೆ ಮತ್ತು ಈ ಯೋಜನೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸಲು ವಿ. ಸೋಮಣ್ಣ ಅವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ವೈಜ್ಞಾನಿಕವಾಗಿ ಅಧ್ಯಯನಗೊಂಡ ಮೂಲ ಯೋಜನೆ ಹಾಗೂ ಅನುಮೋದಿತ ಡಿ.ಪಿ.ಆ‌ರ್. ವರದಿಯಂತೆ ತುಮಕೂರು ಶಾಖಾ ಕಾಲುವೆ ಕಿ.ಮಿ.70.36ರಲ್ಲಿ ನೀರಿನ ಹರಿವು ಒಟ್ಟು ಸುಮಾರು 1289 ಕ್ಯೂಸೆಕ್ಸ್. ಈ ಪೈಕಿ ತುರುವೆಕೆರೆ, ಗುಬ್ಬಿ, ತುಮಕೂರು ಹಾಗೂ ತುಮಕೂರು ಗ್ರಾಮಾಂತರ ಪ್ರದೇಶಗಳ 96ಕಿ.ಮಿ.ಉದ್ದದ ಈ ಭಾಗಕ್ಕೆ 901 ಕ್ಯೂಸೆಕ್ಸ್ ನೀರಿನ ಹರಿವು ಹಂಚಿಕೆಯಾಗಿದೆ. ಅಲ್ಲದೇ ಕುಣಿಗಲ್ ತಾಲ್ಲೂಕಿಗೆ 388 ಕ್ಯೂಸೆಕ್ಸ್ ನೀರು ಹಂಚಿಕೆಯಾಗಿರುತ್ತದೆ. ಈ ಯೋಜನೆಯಲ್ಲಿ ಲಭ್ಯವಿರುವ ಸಂಪೂರ್ಣ ನೀರನ್ನು ಈಗಾಗಲೇ ಹಂಚಿಕೆ ಮಾಡಲಾಗಿದ್ದು, ಪ್ರಸ್ತಾವಿತ ಯೋಜನೆಯ ಮೂಲಕ ಇತರ ಪ್ರದೇಶಕ್ಕೆ ನೀರು ಸರಬರಾಜು ಹೇಗೆ ಸಾಧ್ಯ? ಹೇಮಾವತಿ ಎಕ್ಸ್​ಪ್ರೆಸ್ ಲಿಂಕ್ ಕೆನಾಲ್ ಪೀಡರ್ ಯೋಜನೆ ತುಮಕೂರಿನ ಜಿಲ್ಲೆಯ ನಾಲ್ಕು ತಾಲ್ಲೂಕಿಗೆ ಹಂಚಿಕೆಯಾದ 901 ಕ್ಯೂಸೆಕ್ಸ್ ನೀರಿನ ಹರಿವೆಗೆ ದಕ್ಕೆ ತಂದು ರಾಜ್ಯದ ನೀರಾವರಿ ಸಚಿವರ ತವರು ಜಿಲ್ಲೆಗೆ ನೀರು ಹರಿಸುವ ಅವೈಜ್ಞಾನಿಕ ಕಾರ್ಯಯೋಜನೆ ಇದಾಗಿದೆ ಎಂದಿದ್ದಾರೆ.

ಕರ್ನಾಟಕ ಸರ್ಕಾರ ಅವೈಜ್ಞಾನಿಕವಾಗಿ ಹೊರತರುತ್ತಿರುವ ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಪೀಡರ್ ಈ ಯೋಜನೆಯು ತುಮಕೂರು ಜಿಲ್ಲೆಯ ತುರುವೆಕೆರೆ, ಗುಬ್ಬಿ, ತುಮಕೂರು (ಗ್ರಾಮಾಂತರ) ಹಾಗೂ ತುಮಕೂರು (ನಗರ) ಭಾಗದ ಜನ ಸಾಮಾನ್ಯರ ಹಾಗೂ ಜಿಲ್ಲೆಯ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಲಿದೆ. ಈ ಕೆನಾಲ್ ನಿರ್ಮಾಣದಿಂದ ಹೈಡ್ರಾಲಿಕ್ ಹೆಡ್ ಕುಸಿದು ಸಕಾಲದಲ್ಲಿ ನೀರು ಪೂರೈಕೆಯಲ್ಲಿ ಕೊರತೆಯಾಗುವ ಆತಂಕವನ್ನು ಈ ಭಾಗದ ಮುಗ್ಧ ರೈತರು ಹಾಗೂ ತಾಂತ್ರಿಕ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ರಾಜ್ಯ ಸರ್ಕಾರ ಈ ಬಗ್ಗೆ ಮೃದು ಧೋರಣೆ ತಾಳಿರುವುದು ಖಂಡನೀಯ. ತುಮಕೂರು ಜಿಲ್ಲೆಯ ಅವಿಭಾಜ್ಯ ಅಂಗವಾದ ಕುಣಿಗಲ್ ಭಾಗಕ್ಕೆ ಹಂಚಿಕೆಯಾದ ನೀರಿನ ಹರಿವಿಗೆ ದಕ್ಕೆ ತಂದು ಈ ಭಾಗದ ರೈತರಿಗೂ ಅನ್ಯಾಯ ಉಂಟು ಮಾಡುವ ರಾಜ್ಯ ಸರ್ಕಾರದ ಈ ಕ್ರಮ ಅಸಂಬದ್ಧವಾಗಿದೆ.

ಮಾಗಡಿ, ರಾಮನಗರ ಮತ್ತು ಕನಕಪುರ ಭಾಗಕ್ಕೆ ಮಂಚನಬೆಲೆ ಮತ್ತು ತಿಪ್ಪಗೊಂಡಹಳ್ಳಿ ಜಲಾಶಯಗಳ ಮೂಲಕ ಸಾಕಷ್ಟು ನೀರು ಕಲ್ಪಿಸುವುದಕ್ಕೆ ಅವಕಾಶ ಇದ್ದಾಗ್ಯೂ ಸಹ ತುಮಕೂರಿನ ಭಾಗದ ಜನರನ್ನು ಅನಾವಶ್ಯಕವಾಗಿ ಗೊಂದಲಕ್ಕೆ ಒಳಪಡಿಸುವುದು ಎಷ್ಟರ ಮಟ್ಟಿಗೆ ಸರಿ? ಯಾವ ಕಾರಣಕ್ಕೂ ತುಮಕೂರಿನ ಜಿಲ್ಲೆಯಲ್ಲಿನ ಸಮನ್ವಯತೆಯನ್ನು ಮತ್ತು ಜನಸಾಮಾನ್ಯರ ಸಹನೆಯನ್ನು ಕೆದಕುವ ಕಾರ್ಯತಂತ್ರದ ಯೋಜನೆ ಇದಾಗಬಾರದು. ಈ ಯೋಜನೆಯ ಸಾಧಕ-ಭಾದಕ ಅಧ್ಯಯನ ಮಾಡದೇ ಕರ್ನಾಟಕ ರಾಜ್ಯ ಸರ್ಕಾರ ತರಾತುರಿಯಲ್ಲಿ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರ ಅತ್ಯಂತ ಖಂಡನೀಯವಾದದ್ದು.

ಆದ್ದರಿಂದ ಜನಸಾಮಾನ್ಯರು, ರೈತರು ಮತ್ತು ಬುದ್ದಿ ಜೀವಿಗಳು ಈ ಯೋಜನೆಯ ವಿರುದ್ದ ರಾಜ್ಯ ಸರ್ಕಾರದ ಈ ಕ್ರಮಕ್ಕೆ ಬೀದಿಗಿಳಿದು ಬಹಿಷ್ಕಾರ ಹಾಕುವ ಮುನ್ನವೇ, ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ತಾವು ಕೂಡಲೆ ಮಧ್ಯಪ್ರವೇಶಿಸಿ ಕಾಮಗಾರಿಯನ್ನು ನಿಲ್ಲಿಸಬೇಕು. ಸುದೀರ್ಘ ಅನುಭವವುಳ್ಳವರಾದ ತಾವು ಈ ವಿಷಯದಲ್ಲಿ ಕೂಡಲೇ ಮದ್ಯಪ್ರವೇಶಿಸಬೇಕು. ತುಮಕೂರಿನ ಜನತೆಯ ಹಿತಕಾಯುವ ನಿಟ್ಟಿನಲ್ಲಿ ತಕ್ಷಣವೇ ಈ ಅವೈಜ್ಞಾನಿಕ ಯೋಜನೆಯ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಎಂದು ವಿ. ಸೋಮಣ್ಣ ಆಗ್ರಹಿಸಿದ್ದಾರೆ.

ತುಮಕೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಅಮಾಯಕ ಜನ ಪೋಲಿಸರ ಕ್ರಮಕ್ಕೆ ಒಳಗಾಗುವ ಪರಿಸ್ಥಿತಿಯ ನಿರ್ಮಾಣಕ್ಕೆ ಅವಕಾಶವನ್ನು ನೀಡಬಾರದು. ಕಾನೂನು ಸುವ್ಯವಸ್ಥೆ ಹದಗೆಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಅವೈಜ್ಞಾನಿಕ ಯೋಜನೆಯನ್ನು ಕೈಗೆತ್ತಿಗೊಂಡು ಕಾಮಗಾರಿ ಪ್ರಾರಂಭಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ತುಮಕೂರಿನ ರೈತರ ನೆಮ್ಮದಿ ಕೆಡಿಸುವ ಈ ಯೋಜನೆಯ ಕಾಮಾಗಾರಿಯನ್ನು ಕೂಡಲೇ ನಿಲ್ಲಿಸಿ. ಈ ಬಗ್ಗೆ ಕೂಡಲೇ ಕ್ರಮ ಜರುಗಿಸಿ ರಾಜ್ಯ ಸರ್ಕಾರದ  ತೀರ್ಮಾನವನ್ನು ದಿನಾಂಕ 31.05.2025ರೊಳಗೆ ಪ್ರಕಟಿಸಿ. ಇಲ್ಲದಿದ್ದಲ್ಲಿ ಇದರಿಂದ ಉಂಟಾಗುವ ತೊಂದರೆಗೆ ರಾಜ್ಯ ಸರ್ಕಾರ ಸಂಪೂರ್ಣ ಹೊಣೆಗಾರರಾಗಬೇಕಾಗುತ್ತದೆ ಎಂದು ವಿ. ಸೋಮಣ್ಣ ಹೇಳಿದ್ದಾರೆ.

ಇದನ್ನೂ ಓದಿ : ಮುಖ್ಯ ಇಂಜಿನಿಯರ್​ಗಳ ವರ್ಗಾವಣೆಗೆ ಡಿಕೆಶಿ ಕೆಂಡಾಮಂಡಲ – ಕೂಡಲೇ ತಡೆಹಿಡಿಯಲು ಮುಖ್ಯ ಕಾರ್ಯದರ್ಶಿಗೆ ಸೂಚನೆ!

Btv Kannada
Author: Btv Kannada

Read More