ಬೆಂಗಳೂರು : ತಮ್ಮ ಪೂರ್ವಾನುಮತಿ ಇಲ್ಲದೆ ಜಲಸಂಪನ್ಮೂಲ ಇಲಾಖೆಗೆ ಮುಖ್ಯ ಇಂಜಿನಿಯರ್‌ಗಳ ವರ್ಗಾವಣೆ ಮಾಡಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಂಡಾಮಂಡಲವಾಗಿದ್ದಾರೆ. ಈ ಸಂಬಂಧ ಮೇ 13ರಂದು ಮುಖ್ಯ ಕಾರ್ಯದರ್ಶಿಗೆ ಡಿಸಿಎಂ ಖಾರವಾಗಿ ಪತ್ರ ಬರೆದಿದ್ದು, ಈ ಪತ್ರ ಇದೀಗ ಬಿಟಿವಿಗೆ ಲಭ್ಯವಾಗಿದೆ.
ನನ್ನ ಇಲಾಖೆಗೆ ಒಳಪಡುವ ವರ್ಗಾವಣೆ, ನೇಮಕಾತಿ, ಬೇರೆ ವಿಚಾರಗಳು ನನ್ನ ಗಮನಕ್ಕೆ ಬರಬೇಕು. ನನ್ನ ಪೂರ್ವಾನುಮತಿ ಬೇಕು. ಸರ್ಕಾರ ಬಂದ ಆರಂಭದಲ್ಲೇ ಇವೆಲ್ಲವನ್ನೂ ನಾನು ಟಿಪ್ಪಣಿ ಮೂಲಕ ಸೂಚಿಸಿದ್ದೆ ಎಂದು ಡಿಕೆಶಿ ಕೆಂಡಾಮಂಡಲವಾಗಿದ್ದಾರೆ.
ಡಿಕೆಶಿ ಪತ್ರದಲ್ಲಿ ಏನಿದೆ? ನನ್ನ ಇಲಾಖೆಗೆ ಒಳಪಡುವ ವಿಭಾಗಗಳಿಗೆ ಸಂಬಂಧಿಸಿದಂತೆ ವರ್ಗಾವಣೆ, ನೇಮಕಾತಿ ಆದೇಶಕ್ಕೆ ನನ್ನ ಅನುಮತಿ ಬೇಕು. ಡಿಪಿಎಆರ್‌ನಿಂದ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆದ ನಂತರವೇ ಹೊರಡಿಸಬೇಕು. ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಟಿಪ್ಪಣಿ ಮೂಲಕ ನಿಮಗೆ ತಿಳಿಸಲಾಗಿತ್ತು. ನಂತರ ಮುಖ್ಯ ಇಂಜಿನಿಯರ್‌ಗಳ ಕರ್ತವ್ಯಕ್ಕೆ ಸಂಬಂಧಿಸಿದ ಕಾರ್ಯವ್ಯಾಪ್ತಿಯನ್ನು ಜಲಸಂಪನ್ಮೂಲ ಇಲಾಖೆಯಿಂದ ಡಿಪಿಎಆರ್‌ಗೆ ವಹಿಸುವ ಕಡತದಲ್ಲಿಯೂ ಸೂಚನೆ ಕೊಡಲಾಗಿತ್ತು.
ನನ್ನ ಗಮನಕ್ಕೆ ತಂದು ನನ್ನ ಅನುಮೋದನೆ ಪಡೆದ ನಂತರವೇ ಡಿಪಿಎಆರ್‌ನಿಂದ ಆದೇಶ ಹೊರಡಿಸಬಹುದೆಂದು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ಆದರೆ ಮೇ 9ರಂದು ಹೊರಡಿಸಿದ ಆದೇಶದಲ್ಲಿ ನನ್ನ ಅನುಮೋದನೆ ಪಡೆಯದೇ ಕೆಲವು ಮುಖ್ಯ ಇಂಜಿನಿಯರ್‌ಗಳನ್ನು ಜಲಸಂಪನ್ಮೂಲ ಇಲಾಖೆಗೆ ವರ್ಗಾವಣೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ನನ್ನ ಸೂಚನೆಯನ್ನು ಕಡೆಗಣಿಸಿ ಆದೇಶ ಹೊರಡಿಸಿರುವುದನ್ನು ನಾನು ಆಕ್ಷೇಪಿಸುತ್ತಿದ್ದೇನೆ. ಆದ್ದರಿಂದ ಈ ಆದೇಶವನ್ನು ಕೂಡಲೇ ವಾಪಸು ಪಡೆಯಬೇಕು. ಇಂತಹ ವಿಚಾರಗಳ ಬಗ್ಗೆ ಯಾವುದೇ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆಯಬೇಕು ಎಂದು ಡಿಸಿಎಂ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಸಚಿವ ರಾಜಣ್ಣ ಹನಿಟ್ರ್ಯಾಪ್ ಕೇಸ್ ಠುಸ್ – ತನಿಖೆಯಲ್ಲಿ ಸಾಕ್ಷಿಯೇ ಇಲ್ಲ!
