ಬೆಂಗಳೂರು : ಸಚಿವ ಕೆ.ಎನ್.ರಾಜಣ್ಣಗೆ ಹನಿಟ್ರ್ಯಾಪ್ ಆರೋಪ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಡಿಜಿ-ಐಜಿಪಿಗೆ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ. ವಿಚಾರಣೆ ಮುಕ್ತಾಯ ವರದಿ ಸಲ್ಲಿಸಿದ ಸಿಐಡಿ ಅಧಿಕಾರಿಗಳು, ಕೆ.ಎನ್.ರಾಜಣ್ಣ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದಿದೆ.
ಸಿಐಡಿ ಅಧಿಕಾರಿಗಳು ಸಚಿವ ರಾಜಣ್ಣ ಅವರ ದೂರು ಆಧರಿಸಿ ಪ್ರಕರಣದ ತನಿಖೆ ನಡೆಸಿದ್ದರು. ಇದೀಗ ಸಚಿವರ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಸಿಐಡಿ ಹೇಳಿದೆ. ಡಿಜಿಐಜಿಪಿ ಸಿಐಡಿ ಅಧಿಕಾರಿಗಳು ಸಲ್ಲಿಸಿರುವ ವರದಿಯನ್ನು ಪರಿಶೀಲನೆ ಮಾಡಿ, ಬಳಿಕ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದ್ದಾರೆ. ಪ್ರಕರಣದ ತನಿಖಾ ವರದಿ ಗೃಹಮಂತ್ರಿ ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗೂ ಸಲ್ಲಿಕೆಯಾಗಲಿದೆ.
ಸಚಿವ ರಾಜಣ್ಣ ತಮ್ಮ ಆರೋಪಕ್ಕೆ ಸಂಬಂಧ ಯಾವುದೇ ಸರಿಯಾದ ಮಾಹಿತಿ ನೀಡಿಲ್ಲ. ದೂರಿನಲ್ಲಿದ್ದ ಅಸ್ಪಷ್ಟ ಮಾಹಿತಿ ಹೊರತುಪಡಿಸಿ ಯಾವುದೇ ಮಾಹಿತಿ ನೀಡಿಲ್ಲ. ಹನಿಟ್ರ್ಯಾಪ್ ಯತ್ನಿಸಿದ್ದ ಯುವತಿ, ಗಡ್ಡಧಾರಿ ಯುವಕ ಸಿಐಡಿ ವಿಚಾರಣೆಯಲ್ಲೂ ಪತ್ತೆಯಾಗಿಲ್ಲ. ಇಡೀ ವಿಚಾರಣೆಯಲ್ಲಿ ಯಾರೋಬ್ಬರೂ ಟ್ರ್ಯಾಪ್ಗೆ ಯತ್ನಿಸಿದ ಯುವತಿಯ ಬಗ್ಗೆ ಬಾಯ್ಬಿಟ್ಟಿಲ್ಲ. ಯುವತಿ ಸಚಿವರನ್ನ ಭೇಟಿ ಮಾಡಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷಿಗಳೂ ಲಭ್ಯವಾಗಿಲ್ಲ.
ಕೆ.ಎನ್.ರಾಜಣ್ಣ, ಅವರ ಗನ್ಮ್ಯಾನ್, ಸೆಕ್ಯೂರಿಟಿ ಹಾಗೂ ಪಿಎಗಳನ್ನು ಸಿಐಡಿ ವಿಚಾರಣೆ ನಡೆಸಿದೆ. ಯುವತಿಗೆ ಕೆನ್ನೆಗೆ ಬಾರಿಸಿ ಕಳುಹಿಸಿದ್ದಾಗಿ ರಾಜಣ್ಣ ಹೇಳಿದ್ದರು. ಆದ್ರೆ ಸೆಕ್ಯೂರಿಟಿ ಹಾಗೂ ಪಿಎಗಳು ಘಟನೆ ನಮಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ದೂರು ಕೊಟ್ಟ ಸಚಿವ ರಾಜಣ್ಣಗೆ ಕೇಸ್ನ ಬಗ್ಗೆ ತನಿಖೆ ಮುಂದುವರೆಯುವುದು ಇಷ್ಟವಿಲ್ಲ. ಮಾಹಿತಿ ಕೊರತೆಯಿಂದಾಗಿ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಲು ಸಾಧ್ಯವಾಗ್ತಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಗಿಗ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ – ಗವರ್ನರ್ ಗೆಹ್ಲೋಟ್ಗೆ ಸಚಿವ ಸಂತೋಷ್ ಲಾಡ್ ಅಭಿನಂದನೆ!
