ಬೆಂಗಳೂರು : ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿ ವಿವಾದಕ್ಕೆ ಕಾರಣರಾಗಿರುವ ನಟ ಕಮಲ್ ಹಾಸನ್‌ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದನ್ನು ಕನ್ನಡಿಗರು ಹಾಗೂ ಕರ್ನಾಟಕದ ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ಖಂಡನೆ ಮಾಡಿವೆ. ಕನ್ನಡದ ವಿಚಾರದಲ್ಲಿ ಇಡೀ ಕರ್ನಾಟಕವೇ ಒಂದಾಗಿದ್ದು, ನಟ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಲೇಬೇಕು ಎನ್ನುವ ಆಗ್ರಹ ಹೆಚ್ಚಾಗಿದೆ. ಅಲ್ಲದೇ ಅವರ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು ಎಂದೂ ಕನ್ನಡಿಗರು ಆಗ್ರಹಿಸಿದ್ದಾರೆ.
ಇದೀಗ ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ವಿರುದ್ದ ಆಕ್ರೋಶ ಭುಗಿಲೇಳುತ್ತಿರುವ ಹೊತ್ತಲ್ಲೇ, ಬಸವೇಶ್ವರನಗರ ಸರ್ಕಲ್ ಪವಿತ್ರ ಪ್ಯಾರಡೈಸ್ ಬಳಿ ರಾತ್ರೋರಾತ್ರಿ ಕನ್ನಡಾಭಿಮಾನಿ ಓರ್ವ ಕಮಲ್ ಹಾಸನ್ ಭಾವಚಿತ್ರಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಧಿಕ್ಕಾರ ಕೂಗಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.
ಇನ್ನು, ಈಗಾಗಲೇ ನಟ ಜಗ್ಗೇಶ್, ಚೇತನ್ ಅಹಿಂಸ, ನಟ ಶ್ರೀನಾಥ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕೆಲ ನಟ-ನಟಿಯರು ಕಮಲ್ ಹಾಸನ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಕನ್ನಡದ ಭಾಷೆ ಬಗ್ಗೆ ಹಗುರವಾಗಿ ಮಾತನಾಡಿರುವ ಕಮಲ್ ಹಾಸನ್ ಅವರು ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಮಲ ಹಾಸನ್ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ : ತುಮಕೂರಿನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಜಾತಿನಿಂದನೆ – ಇಬ್ಬರು ಕಾನ್‌ಸ್ಟೇಬಲ್‌ಗಳು ಸಸ್ಪೆಂಡ್!
