ಬೆಂಗಳೂರು : ಭಾರತೀಯ ಸಶಸ್ತ್ರ ಪಡೆಗಳ ಗೌರವಾರ್ಥ ‘ಜೈ ಹಿಂದ್ ಸಭಾ’ ಎಂಬ ವಿಶೇಷ ಕಾರ್ಯಕ್ರಮವನ್ನು ನಗರದ ಟೌನ್ ಹಾಲ್ನಲ್ಲಿ ರಾಜ್ಯ ಸರ್ಕಾರದಿಂದ ನಿನ್ನೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಸೇನಾ ಅಧಿಕಾರಿಗಳು ಹಾಗೂ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಹಾಗೂ ದೇಶಸೇವೆಗಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ ಕುಟುಂಬಗಳನ್ನು ಗೌರವಿಸಲಾಯಿತು.
‘ಜೈ ಹಿಂದ್ ಸಭಾ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯುತ್ತಾ, ದೇಶವಾಸಿಗಳ ಪ್ರಾಣ, ಆಸ್ತಿಪಾಸ್ತಿಗಳ ರಕ್ಷಣೆಯ ಮಹತ್ತರ ಕರ್ತವ್ಯವನ್ನು ಮಾಡುತ್ತಿರುವುದು ನಮ್ಮ ಹೆಮ್ಮೆಯ ಸೈನಿಕರು. ಇದೇ ಕಾರಣಕ್ಕೆ ತಂದೆ-ತಾಯಿ, ಶಿಕ್ಷಕರು, ವೈದ್ಯರು, ಅನ್ನದಾತರಂತೆ ಸೈನಿಕರನ್ನು ಸ್ಮರಿಸಲಾಗುತ್ತದೆ ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, ರಾಜ್ಯ ಸರ್ಕಾರ ದೇಶ ಕಾಯುತ್ತಿರುವ ಸೈನಿಕರನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಕಾಣುತ್ತಿದೆ. ಸೈನಿಕರ ಕಲ್ಯಾಣ ಕಾರ್ಯಗಳಿಗೆ ಸದಾ ಬದ್ಧರಿದ್ದೇವೆ. ಈ ಉದ್ದೇಶದಿಂದ ಮಿಲಿಟರಿ ಕ್ಯಾಂಟೀನ್ಗಳಿಗೆ ಇನ್ನು ಮುಂದೆ ಅಬಕಾರಿ ಸುಂಕ ವಿಧಿಸಲಾಗುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಮಿಲಿಟರಿ ಕ್ಯಾಂಟೀನ್ಗಳಿಗೆ ತೆರಿಗೆ ಹೆಚ್ಚಳಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂಬ ವದಂತಿಯನ್ನು ಸಿಎಂ ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ. ಸಿಎಂ ಈ ವಿಚಾರವನ್ನು ಘೋಷಣೆ ಮಾಡುತ್ತಿದ್ದಂತೆಯೇ ಸಭೆಯಲ್ಲಿ ನೆರದಿದ್ದವರು ಚಪ್ಪಾಳೆ ಮೂಲಕ ಸ್ವಾಗತಿಸಿದ್ದಾರೆ.
ಮಾಜಿ ಯೋಧರ ಕಲ್ಯಾಣಕ್ಕಾಗಿ ನಿಗಮ ಸ್ಥಾಪನೆ : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಮಾಜಿ ಯೋಧರ ಕಲ್ಯಾಣಕ್ಕಾಗಿ ಒಂದು ನಿಗಮ ಸ್ಥಾಪಿಸುವ ಬಗ್ಗೆ ಚಿಂತಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ. ಕರ್ನಾಟಕ ಸರ್ಕಾರವು ಮಾಜಿ ಯೋಧರು ಮತ್ತು ಅವರ ಕುಟುಂಬಗಳಿಗೆ ಶಕ್ತಿ ನೀಡಲು ಸದಾ ಸಿದ್ಧವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : RCB ಫೈನಲ್ ಎಂಟ್ರಿಗೆ ಇಂದೇ ಗೋಲ್ಡನ್ ಚಾನ್ಸ್.. ಬಲಿಷ್ಠ ತಂಡದಲ್ಲಿ ಯಾರಿಗೆಲ್ಲ ಸ್ಥಾನ?
