ಮಂಡ್ಯ : ಸರ್ಕಾರಿ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತರು ವಿಪರೀತ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಮಗೆ ಕೆಲಸ ಮಾಡಲು ಆಗುತ್ತಿಲ್ಲ, ಸಾಮಾಜಿಕ ಕಾರ್ಯಕರ್ತರು ಬಹಿರಂಗ ವಿಡಿಯೋ ಮಾಡಿ ನಮಗೆ ಹಿಂಸೆ ಕೊಡುತ್ತಿದ್ದಾರೆ, ಕೂಡಲೇ ನಮಗೆ ರಕ್ಷಣೆ ಕೊಡಿ ಎಂದು ಸರ್ಕಾರಿ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇನ್ನು ರಾಜ್ಯ ಸರ್ಕಾರಿ ನೌಕರ ಸಂಘಕ್ಕೂ ಕೂಡ ಮಧ್ಯಸ್ಥಿಕೆ ವಹಿಸುವಂತೆ ಸರ್ಕಾರಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮೇ.25ರಂದು ಮಂಡ್ಯ ನಗರದ ನೂರಡಿ ರಸ್ತೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಚಂದ್ರಕಲಾ ಡಿ, ವಾಣಿಜ್ಯ ತೆರಿಗೆ ಪರಿವೀಕ್ಷಕರಾದ ಮಹೇಶ್ ಎಂ.ಬಿ ಹಾಗೂ ವಾಹನ ಚಾಲಕ ನವೀನ್ ಕುಮಾರ್ ಹೆಚ್.ಎಸ್ ಮೂವರೂ ಜಾಗೃತಿ ಕಾರ್ಯ ನಿರ್ವಹಿಸುತ್ತಿದ್ದಾಗ ಸಾಮಾಜಿಕ ಕಾರ್ಯಕರ್ತರು ಏಕಾಏಕಿ ವಾಹನವನ್ನು ಅಡ್ಡಹಾಕಿ, ಮಹಿಳಾ ಅಧಿಕಾರಿಗಳಿಗೆ ಮಾನಸಿಕವಾಗಿ ಕಿರುಕುಳ ನೀಡಿ ಅವ್ಯಾಚ ಪದಗಳಿಂದ ನಿಂದಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ಎಂ.ಬಿ ನಾಗಣ್ಣ, ಚಂದ್ರು ಮತ್ತು ಸಹಚರರು ಎಂಬುದಾಗಿ ಪರಿಚಯ ಮಾಡಿಕೊಂಡು ಫೆಸ್‌ಬುಕ್ ಮುಖಾಂತರ ಲೈವ್ ವಿಡಿಯೋ ಮಾಡುತ್ತ ಅಧಿಕಾರಿಗಳಿಗೆ ನಾನಾ ವಿಧದಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ರಜಾ ದಿನವಾದ ಭಾನುವಾರದಂದು ಸರ್ಕಾರಿ ವಾಹನವನ್ನು ದುರುಪಯೋಗ ಪಡಿಸಿಕೊಂಡಿರುವುದಾಗಿ ಆರೋಪಿಸುತ್ತಾ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿ ಜೊತೆಗೆ ಸೂಕ್ತ ಪ್ರಾಧಿಕಾರವಲ್ಲದಿದ್ದರೂ ಸಹ ಸೂಕ್ತ ದಾಖಲಾತಿಯನ್ನು ನೀಡುವಂತೆ, ಗುರುತಿನ ಚೀಟಿಯನ್ನು ತೋರಿಸುವಂತೆ ಹಾಗೂ ವಾಹನ ಚಾಲಕರಿಗೆ ಲಾಗ್ ಬುಕ್ ತೋರಿಸುವಂತೆ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಆದರೂ ಸಾರ್ವಜನಿಕ ಹಿತದೃಷ್ಟಿಯಿಂದ ನೌಕರರು ಗುರುತಿನ ಚೀಟಿ ಮತ್ತು ವಿಭಾಗದ ಡ್ಯೂಟಿ ಚಾರ್ಟ್ನ್ನು ತೋರಿಸಿದ್ದರೂ ವಿಡಿಯೋವನ್ನು ಫೆಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬಕ್ಕೆ ತುಂಬಾ ಮುಜುಗರ ಉಂಟಾಗಿದ್ದು, ಆತ್ಮಸ್ಥೆರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಛೇರಿಗೆ ಖುದ್ದು ಭೇಟಿ ನೀಡಿ ಭಾನುವಾರದ ಕಾರ್ಯದ ಕುರಿತು ದಾಖಲಾತಿಗಳನ್ನು ಸೋಮವಾರ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಈ ಘಟನೆಯಿಂದ ಇದೀಗ ಸಿಬ್ಬಂದಿ ವರ್ಗದವರು ಜಾಗೃತಿ ಕಾರ್ಯ ನಿರ್ವಹಿಸಲು ಇಚ್ಛೆ ಪಡುತ್ತಿಲ್ಲ. ಭಾನುವಾರವನ್ನು ಸಹ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಅಹಿತಕರ ಘಟನೆ ಸಿಬ್ಬಂದಿಗಳಿಗೆ ವೈಯಕ್ತಿಕವಾಗಿ ಮುಜುಗರ ಉಂಟು ಮಾಡಿದೆ. ಆದ್ದರಿಂದ ಮುಂದಿನ ಕರ್ತವ್ಯ ನಿರ್ವಹಣೆಗೆ ಇಂತಹ ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಕಾರ್ಯಕರ್ತರವರು ಇಂತಹ ವಿಡಿಯೋಗಳನ್ನು ಹರಿಬಿಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಸಿಬ್ಬಂದಿಗಳಿಗೆ ರಕ್ಷಣೆಯ ನೀಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಸ್ಯಾಮಿಸ್ ಡ್ರೀಮ್ಲ್ಯಾಂಡ್ ಹೊಸ ಪ್ರಾಜೆಕ್ಟ್ – ನೂತನ ಕಾರ್ಯಕ್ಕೆ ಇಂದ್ರಜಿತ್ ಲಂಕೇಶ್ ಸಾಥ್!
