“ದಾರಿ ಯಾವುದಯ್ಯ ವೈಕುಂಠಕೆ” ಎಂಬ ಉತ್ತಮ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಸಿದ್ದು ಪೂರ್ಣಚಂದ್ರರವರು ಸದಾ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಹಲವು ವಿಭಿನ್ನ ಚಿತ್ರಗಳನ್ನು ಈಗಾಗಲೇ ನಿರ್ದೇಶನ ಮಾಡಿದ್ದಾರೆ. ಬ್ರಹ್ಮಕಮಲ, ತಾರಿಣಿ, ಈ ಪಾದ ಪುಣ್ಯ ಪಾದ, ಇವುಗಳ ಸಾಲಿಗೆ ಮತ್ತೊಂದು ಹೊಸ ಚಿತ್ರ “ಪುಟ್ಟಣ್ಣನ ಕತ್ತೆ” ಎಂಬ ಚಿತ್ರವೂ ಸೇರಿಕೊಳ್ಳುತ್ತದೆ.
ನಿರ್ದೇಶಕರ ಜನುಮ ದಿನದಂದು ಚಿತ್ರತಂಡ “ಪುಟ್ಟಣ್ಣನ ಕತ್ತೆ” ಪೋಸ್ಟರ್ ಬಿಡುಗಡೆ ಮಾಡಿದೆ. ಮೊದಲ ಪೋಸ್ಟರ್ನಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಮುಂದಿನ ಪೋಸ್ಟರ್ನಲ್ಲಿ ಕಲಾವಿದರನ್ನು ತೋರಿಸಲಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ನಿರ್ದೇಶಕ ಪೂರ್ಣಚಂದ್ರ ಅವರು ಚಿತ್ರದ ಬಗ್ಗೆ ಮಾತನಾಡಿ, ಎಲ್ಲರೂ ನಾಯಿ ಮೇಲೆ ಚಿತ್ರ ಮಾಡಿದರೆ ನಾನ್ಯಾಕೆ ಕತ್ತೆ ಮೇಲೆ ಕತೆ ಬರೆದು ಚಿತ್ರ ಮಾಡಬಾರದು ಅಂತ ಐಡಿಯಾ ಬಂದಾಗ ಈ ಕಥೆ ಹೊಳೆಯಿತು. ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಮನುಷ್ಯರ ಜೊತೆ ಕತ್ತೆಯನ್ನು ಬಳಸಲಾಗಿದೆ. ಮೊದಲಿಗೆ ಇದು ಸಾವಾಲಾಗಿ ಪರಿಣಮಿಸಿದರೂ ನಂತರ ಅದರೊಂದಿಗೆ ನಟರನ್ನು ಬಿಟ್ಟು ಅಭ್ಯಾಸ ಮಾಡಿಸಿದೆವು. ನಟನೆ ಜೊತೆಗೆ ಅದರೊಂದಿಗೆ ಬಾಂದವ್ಯ ಬೆಳೆಸಿಕೊಂಡು ನಂತರ ಚಿತ್ರೀಕರಿಸಲಾಯಿತು.
ನಮ್ಮೆಲ್ಲರಿಗೂ ಕತ್ತೆಯ ಜೊತೆಗಿನ ಒಡನಾಟ ಹೊಸದು, ಅದರ ಮನಸ್ಥಿತಿ ನೋಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಮುಂದಿನ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಾರಂಭದಲ್ಲಿ ಕಷ್ಟವೆಸಿದರೂ ಒಂದೆರಡು ದಿನಗಳಲ್ಲಿ ಕತ್ತೆಯೂ ನಮ್ಮೊಂದಿಗೆ ಸಹಕರಿಸಿದ್ಧು ವಿಶೇಷ. ಇದಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತಿದ್ದೇನೆಂದು “ಸಿದ್ದು ಪೂರ್ಣಚಂದ್ರ” ರವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಅನೀಶ್ ಆರ್ಯನ್, ಭೀಮೇಶ್, ಲಿಯೋ ಶರ್ಮಾ ಮತ್ತು ವಿಭಾ ವಂದನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಲಾರತಿ ಮಹದೇವ್, ಲಕ್ಕಿ ಶಂಕರ್, ಸಿದ್ದು ಮಂಡ್ಯ, ರಶ್ಮಿ ಮೈಸೂರು, ಬಾಬು, ರೋಹಿಣಿ, ಎನ್‌ಟಿ ರಾಮಸ್ವಾಮಿ, ಮತ್ತು ಕವಿತಾ ಕಂಬಾರರಂತಹ ತಾರಾಗಣವಿದೆ. ತನ್ಮಯ್ ಎಸ್ ಗೌಡರಿಂದ ಪೂರ್ಣಚಂದ್ರ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರಕ್ಕೆ ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಒದಗಿಸಿದ್ದು, ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ : ಬಿಟಿವಿಯ ಬಿಗ್ ಇಂಪ್ಯಾಕ್ಟ್ – 100 ಕೋಟಿ ಅಕ್ರಮ ಬಯಲಾಗ್ತಿದ್ದಂತೆ ಬೌರಿಂಗ್ ಕ್ಲಬ್ ಅಧ್ಯಕ್ಷ ಬಾಸ್ಕರ್ ಸುಂದರ್ ರಾಜ್ ರಿಸೈನ್!
