ಬೆಂಗಳೂರು ‘ಏರ್‌ ಶೋ’ಗೆ ಇಂದು ಅದ್ದೂರಿ ಚಾಲನೆ – 4 ದಿನ ಬಾನಂಗಳದಲ್ಲಿ ಮೋಡಿ ಮಾಡಲಿವೆ ಲೋಹದ ಹಕ್ಕಿಗಳು!

ಬೆಂಗಳೂರು : 2025ನೇ ಸಾಲಿನ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ, 15ನೇ ಬೆಂಗಳೂರು ‘ಏರೋ ಇಂಡಿಯಾ’ ಶೋಗೆ ಇಂದು ಅದ್ದೂರಿ ಚಾಲನೆ ಸಿಗಲಿದ್ದು, ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ 4 ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ.

ಈ ಬಾರಿ ‘‘ರನ್​ವೇ ಟು ಬಿಲಿಯನ್ ಅಪಾರ್ಚುನಿಟಿಸಿ’’ ಟ್ಯಾಗ್ ಲೈನ್​ನಲ್ಲಿ‌ ಏರ್​ಶೋ ಆಯೋಜಿಸಲಾಗಿದೆ. ಇಂದು ಬೆಳಗ್ಗೆ 9.30ಕ್ಕೆ ಏರ್​ಶೋಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಲಿದ್ದಾರೆ. ನೀಲಾಕಾಶದಲ್ಲಿ ಯುದ್ಧ ವಿಮಾನಗಳು ಘರ್ಜಿಸಲು ತಯಾರಾಗಿದ್ದು, ಉಕ್ಕಿನ ಹಕ್ಕಿಗಳ ಮ್ಯಾಜಿಕ್ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ.

ವಿಶೇಷವೆಂದರೆ ಏರ್ ​​ಶೋನಲ್ಲಿ ರಷ್ಯಾ ಮತ್ತು ಅಮೆರಿಕನ್​ ಫೈಟ್​ ಏರ್​ಕ್ರಾಫ್ಟ್​ಗಳು ಭಾಗಿ ಆಗಲಿವೆ. 100 ದೇಶಗಳ 900ಕ್ಕೂ ಹೆಚ್ಚು ರಕ್ಷಣಾ ಸಾಮಗ್ರಿ ಉತ್ಪಾದಕರು ಭಾಗವಹಿಸಲಿದ್ದಾರೆ. ವಿವಿಧ ಕಂಪನಿಗಳ 100 ಸಿಇಒಗಳು, 50 ವಿದೇಶಿ ಒಎಂಎಸ್ ಉಪಸ್ಥಿತರಿರಲಿದ್ದಾರೆ. ಎಐ, ಸೈಬರ್ ಸೆಕ್ಯುರಿಟಿ, ಡ್ರೋನ್ ಮತ್ತು ಗ್ಲೋಬಲ್​ ಏರೋಸ್ಪೇಸ್ ಪ್ರದರ್ಶನವಿರಲಿದೆ. ಆತ್ಮನಿರ್ಭರ ಭಾರತದ ಉತ್ಪನ್ನಗಳು ಇರಲಿದ್ದು, 10 ಸೆಮಿನಾರ್​​ಗಳು ಆಯೋಜಿಸಲಾಗಿದೆ. ರಕ್ಷಣಾ ವಲಯದಲ್ಲಿ ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯ ಬಗ್ಗೆ ಚರ್ಚೆಗಳೂ ಆಗಲಿದೆ.

ಸಂಚಾರ ಬದಲಾವಣೆ.. ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ : ಏರ್​​ಶೋನಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದು, ಬಾನಂಗಳದಲ್ಲಿ‌ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳಲು ಕಾತರಾಗಿದ್ದಾರೆ. ಹೀಗಾಗಿ, ಯಲಹಂಕ ಸುತ್ತಮುತ್ತಲಿನ ಹಲವು ರಸ್ತೆಗಳಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆಯಲ್ಲಿ ಹಾಗೂ ಬಾಗಲೂರು ಮುಖ್ಯರಸ್ತೆಯಲ್ಲೂ ಏಕಮುಖ ಸಂಚಾರ ಇರಲಿದೆ. GKVK ಕ್ಯಾಂಪಸ್​​​ನಲ್ಲಿ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಇದ್ದು, ಅಲ್ಲಿಂದ ಉಚಿತ ಬಿಎಂಟಿಸಿ ಎಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಈ ಬಾರಿ 7 ಲಕ್ಷಕ್ಕೂ ಹೆಚ್ಚು ಜನ ಏರ್​ಶೋದಲ್ಲಿ ಭಾಗಿ ಆಗೋ ನಿರೀಕ್ಷೆಯಿದ್ದು, ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

Btv Kannada
Author: Btv Kannada

Read More