ಅಬ್ದುಲ್‌ ರಹೀಂ ಹತ್ಯೆ – ಕರಾವಳಿ ಮತ್ತೆ ಉದ್ವಿಗ್ನ.. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೇ 30ರವರೆಗೆ ನಿಷೇಧಾಜ್ಞೆ ಜಾರಿ!

ಮಂಗಳೂರು : ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದ್ದು, ಮಂಗಳೂರು ದಿನದಿಂದ ದಿನಕ್ಕೆ ಉದ್ವಿಗ್ನಗೊಳ್ಳುತ್ತಿದೆ. ಬಂಟ್ವಾಳ ಸಮೀಪ ಮುಸ್ಲಿಂ ಯುವಕ ಅಬ್ದುಲ್ ರಹೀಂ ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇದೀಗ ಅಬ್ದುಲ್ ರಹೀಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಮೇ 27ರ ಸಂಜೆ 6 ಗಂಟೆಯಿಂದ ಮೇ 30ರ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ಆದೇಶ ಹೊರಡಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಭಿಗಿ ಪೊಲೀಸ್ ಬಂದೋಬಸ್ತ್​ಗೆ ಕ್ರಮ ಕೈಗೊಳ್ಳಲಾಗಿದ್ದು, ಉಡುಪಿ, ಚಿಕಮಗಳೂರು, ಮೈಸೂರು, ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಪಡೆ ತರಿಸಿಕೊಳ್ಳಲು ನಿರ್ಧರಿಸಲಾಗಿದೆ. ಆಯಕಟ್ಟಿನ ಸ್ಥಳಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಅನುಮಾನಾಸ್ಪದ ಚಟುವಟಿಕೆ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

ಘಟನೆ ವಿವರ : ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಪಿಕಪ್‌ ಚಾಲಕ ಅಬ್ದುಲ್ ರಹೀಂ ಮೇಲೆ ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ತಲವಾರಿನಿಂದ ಬೀಭತ್ಸವಾಗಿ ಹಲ್ಲೆಗೈದು ಕೊಲೆಗೈದ ಘಟನೆ ಮಂಗಳವಾರ ಸಂಜೆ ನಡೆದಿದೆ. ಘಟನೆ ವೇಳೆ ಪಿಕಪ್‌ನಲ್ಲಿದ್ದ ಇನ್ನೊಬ್ಬ ವ್ಯಕ್ತಿಗೂ ಗಂಭೀರ ಗಾಯವಾಗಿದೆ. ಕೊಳತ್ತಮಜಲು ಬೆಳ್ಳೂರು ನಿವಾಸಿ ಅಬ್ದುಲ್ ರಹೀಂ​(38) ಮೃತಪಟ್ಟ ವ್ಯಕ್ತಿ. ಪಿಕಪ್‌ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಖಲಂದರ್‌ ಶಾಫಿ (24) ಗಂಭೀರ ಗಾಯಗೊಂಡವರು.

ಇರಾಕೋಡಿ ಎಂಬಲ್ಲಿಮನೆ ಹಾಗೂ ಶೌಚಾಲಯವೊಂದರ ಕೆಲಸ ನಡೆಯುತ್ತಿದ್ದು, ಆ ಮನೆಯವರು ಬೆಳಗ್ಗೆ ಅಬ್ದುಲ್‌ ರಹಿಮಾನ್​ನಲ್ಲಿ ಮರಳು ಬೇಕೆಂದು ಕರೆ ಮಾಡಿ ಹೇಳಿದ್ದರು. ಅದರಂತೆ ಅಬ್ದುಲ್‌ ಮತ್ತು ಖಲಂದರ್‌ ಪಿಕಪ್‌ನಲ್ಲಿ ಮರಳು ಕೊಂಡೊಯ್ದು ಅನ್‌ಲೋಡ್‌ ಮಾಡುತ್ತಿದ್ದ ವೇಳೆ ಏಕಾಏಕಿ ಬೈಕ್‌ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಅರಣ್ಯ ಇಲಾಖೆಗೆ ಖ್ಯಾತ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ರಾಯಭಾರಿ – ಸಂಭಾವನೆ ಬೇಡ ಎಂದ ಸ್ಪಿನ್‌ ಮಾಂತ್ರಿಕ!

Btv Kannada
Author: Btv Kannada

Read More