ಮೇ.31ಕ್ಕೆ ಶ್ರೀರಾಮಚಂದ್ರಾಪುರ ಮಠದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ!

ಗೋಕರ್ಣ : ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಶ್ರೀರಾಮಚಂದ್ರಾಪುರ ಮಠದಿಂದ ವಾರ್ಷಿಕವಾಗಿ ಕೊಡುವ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳು 31ರಂದು ಮಧ್ಯಾಹ್ನ 12.30ಕ್ಕೆ ಗೋಕರ್ಣ ಅಶೋಕೆಯ ಗುರುದೃಷ್ಟಿ ಸಭಾಭವನದಲ್ಲಿ ನಡೆಯಲಿದೆ.

ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿದ ಏಳು ಮಂದಿಗೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀಮಹಾಸ್ವಾಮೀಜಿ ಆರು ಪ್ರಶಸ್ತಿಗಳನ್ನು ಅನುಗ್ರಹಿಸುವರು ಎಂದು ಶ್ರೀಮಠದ ಸಿಓಓ ಸಂತೋಷ್ ಹೆಗಡೆ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಶಕಟಪುರಂ ಶ್ರೀವಿದ್ಯಾಪೀಠಂನ ಆಸ್ಥಾನ ವಿದ್ವಾಂಸರಾದ ಮಧುಸೂಧನ ಶಾಸ್ತ್ರೀ ಹಂಪಿಹೊಳಿ ಅವರಿಗೆ ಶಂಕರ ಕಿಂಕರ ಪ್ರಶಸ್ತಿ, ಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ಅಹಲ್ಯಾ ಶರ್ಮಾ ಮತ್ತು ಗುರುಸೇವೆಯಲ್ಲಿ ಸಾರ್ಥಕತೆ ಕಂಡ ದಿವಂಗತ ಮಹಾಲಕ್ಷ್ಮೀ ತಿಮ್ಮಪ್ಪ ಅವರಿಗೆ ಶ್ರೀಮಾತಾ ಪ್ರಶಸ್ತಿ, ಪ್ರಸಿದ್ಧ ಜ್ಯೌತಿಷ ವಿದ್ವಾಂಸ ಗೋಪಾಲಕೃಷ್ಣ ಭಟ್ಟ ಹಂಡ್ರಮನೆಯವರಿಗೆ ಪಾಂಡಿತ್ಯ ಪುರಸ್ಕಾರ, ದಿವಂಗತ ಮೂಗಿಮನೆ ಗಣಪತಿ ಹೆಗಡೆಯವರಿಗೆ ಪುರುಷೋತ್ತಮ ಪ್ರಶಸ್ತಿ, ಸಾಗರದ ಸಮಾಜಸೇವಕ ಪಿ.ಡಿ. ಶ್ರೀಧರರಾವ್ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ಮತ್ತು ಶ್ರೀಮಠದ ಧನ್ಯಸೇವಕ ಗೋವಿಂದ ತಿಮ್ಮಣ್ಣ ಹೆಗಡೆಯವರಿಗೆ ಧನ್ಯಸೇವಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪಾಂಡಿತ್ಯದ ಮೂಲಕ ಸನಾತನವನ್ನು ಸಂರಕ್ಷಿಸಿದ ಮಹತ್ವಕ್ಕೆ ಸಾರ್ಥಕ ಗೌರವವಾಗಿ ಪಾಂಡಿತ್ಯ ಪುರಸ್ಕಾರ, ಶ್ರೀಶಂಕರ ಭಗವತ್ಪಾದರ ಜೀವನ ಸಂದೇಶಗಳ ಪ್ರಸಾರಕ್ಕೆ ಕಟಿಬದ್ಧರಾದ ಅನುಪಮತೆಗೆ ಶಂಕರ ಕಿಂಕರ ಪ್ರಶಸ್ತಿ, ಲೋಕದ ಒಳಿತಿಗಾಗಿ ಪರಿಶ್ರಮಿಸಿದ ಹಿರಿತನಕ್ಕೆ ಸಾರ್ಥಕ ಗೌರವವಾಗಿ ಪುರುಷೋತ್ತಮ ಪ್ರಶಸ್ತಿ, ಸತ್ಕಾರ್ಯಗಳ ಮೂಲಕ ಸಮೂಹಕ್ಕೆ ಮಮತೆ ಉಣಿಸಿದ ಸಂವೇದನೆಗೆ ಸಾರ್ಥಕ ಗೌರವವಾಗಿ ಶ್ರೀಮಾತಾ ಪ್ರಶಸ್ತಿ, ಸಮಾಜೋದ್ಧಾರಕ್ಕೆ ಕೊಟ್ಟ ವಿಶಿಷ್ಟ ಕೊಡುಗೆಗೆ ಸಾರ್ಥಕ ಗೌರವವಾಗಿ ಚಾತುರ್ಮಾಸ್ಯ ಪ್ರಶಸ್ತಿ ಹಾಗೂ ಶ್ರೀಗುರುಪೀಠಕ್ಕೆ ಸಲ್ಲಿಸಿದ ಸೇವೆಯ ಆದರ್ಶಕ್ಕೆ ಸಾರ್ಥಕ ಗೌರವವಾಗಿ ಧನ್ಯಸೇವಕ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಹುಶ್ರುತ ವಿದ್ವಾಂಸರು ಮತ್ತು ಉತ್ತಮ ವಾಗ್ಮಿಗಳಾದ ಮಧುಸೂದನ ಶಾಸ್ತ್ರೀ ಬೆಳಗಾವಿ ತಾಲೂಕಿನ ರಾಮದುರ್ಗದ ಹಂಪಿಹೊಳಿಯವರು. ಋಗ್ವೇದ, ಯಾಜ್ಞಿಕ, ಜ್ಯೌತಿಷ, ನ್ಯಾಯ, ವೇದಾಂತಗಳ ಅಧ್ಯಯನ ನಡೆಸಿದವರು. ಡಾ.ಎಸ್.ಅಹಲ್ಯಾ ಶರ್ಮಾ ಸಂಸ್ಕೃತಿ ಹಾಗೂ ಆಯುರ್ವೇದ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದವರು. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಶ್ರೀಮಠದ ಗೌರವ ಪ್ರಶಸ್ತಿಗಳಿಂದ ಪುರಸ್ಕರಿಸುವ ಈ ಅಪೂರ್ವ ಸಮಾರಂಭದಲ್ಲಿ ಶ್ರೀಮಠದ ಶಿಷ್ಯಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಹಾಗೂ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಟೈಗರ್ ವಿನೋದ್ ಪ್ರಭಾಕರ್ ಅಭಿನಯದ “ಮಾದೇವ” ಚಿತ್ರ ಜೂ.6ಕ್ಕೆ ರಿಲೀಸ್!

Btv Kannada
Author: Btv Kannada

Read More