ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ಮಾದೇವ” ಚಿತ್ರ ಜೂನ್ 6 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನವೀನ್ ರೆಡ್ಡಿ ಬಿ ನಿರ್ದೇಶಿಸಿದ್ದು, ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್. ಕೇಶವ(ದೇವಸಂದ್ರ) ನಿರ್ಮಿಸಿದ್ದಾರೆ. ಸಿನಿಮಾ ರಿಲೀಸ್ ಕುರಿತು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು.
ನಿರ್ದೇಶಕ ನವೀನ್ ರೆಡ್ಡಿ ಅವರು, “ಮಾದೇವ” ಚಿತ್ರ 1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಚಿತ್ರ. ವಿನೋದ್ ಪ್ರಭಾಕರ್ ಅವರು ಈ ಚಿತ್ರದಲ್ಲಿ “ಹ್ಯಾಂಗ್ ಮ್ಯಾನ್” ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಆ ಕಾಲಘಟ್ಟಕ್ಕೆ ಸರಿ ಹೊಂದುವ ಸ್ಥಳಗಳಲ್ಲೇ ಈ ಚಿತ್ರದ ಚಿತ್ರೀಕರಣವಾಗಿದೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಸೋನಾಲ್ ಮೊಂತೆರೊ ಅಭಿನಯಿಸಿದ್ದಾರೆ. ವಿಶೇಷಪಾತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಅತಿಥಿಪಾತ್ರದಲ್ಲಿ ಮಾಲಾಶ್ರೀ ನಟಿಸಿದ್ದಾರೆ. ಶೃತಿ, ಅಚ್ಯುತಕುಮಾರ್, ಕಾಕ್ರೋಜ್ ಸುಧೀ, ಬಲ ರಾಜ್ವಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಡಿಫರೆಂಟ್ ಡ್ಯಾನಿ, ರಿಯಲ್ ಸತೀಶ್, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ, ಬಾಲಕೃಷ್ಣ ತೋಟ ಛಾಯಾಗ್ರಹಣ, ವಿಜಯ್ ಎಂ ಕುಮಾರ್ ಸಂಕಲನ ಹಾಗು ಗುಣ ಅವರ ಕಲಾ ನಿರ್ದೇಶನವಿರುವ ಈ ಚಿತ್ರ ಜೂನ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಕೋವಿಡ್ ಸಮಯದಲ್ಲಿ ನನಗೆ ನಿರ್ದೇಶಕರು ಈ ಕಥೆ ಹೇಳಿದರು. ಕಥೆ ಬಹಳ ಇಷ್ಟವಾಯಿತು. ನಿರ್ದೇಶಕರು ಹೇಳಿದ ಹಾಗೆ 80 ರ ಕಾಲಘಟ್ಟದ ಕಥೆ. “ಹ್ಯಾಂಗ್ ಮ್ಯಾನ್” ಪಾತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನನಗೆ ತಿಳಿದಿರುವ ಹಾಗೆ ಕನ್ನಡದಲ್ಲಿ ಹ್ಯಾಂಗ್ ಮ್ಯಾನ್ ಕುರಿತಾದ ಕಥೆ ಬಂದಿಲ್ಲ. ನಾನು ಈ ಚಿತ್ರದಲ್ಲಿ ಅಭಿನಯಿಸುವಾಗ ಕೆಲವು ಸನ್ನಿವೇಶಗಳು ನಮ್ಮ ತಂದೆ ಪ್ರಭಾಕರ್ ಅವರ ಅಭಿನಯದ “ಜಿದ್ದು” ಹಾಗೂ “ಕರುಳಿನ ಕೂಗು” ಚಿತ್ರಗಳು ನೆನಪಾದವು. ನಿರ್ಮಾಪಕ ಕೇಶವ್ ಅವರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ರಾಬರ್ಟ್ ಚಿತ್ರದ ನಂತರ ನಾನು ಹಾಗೂ ಸೋನಾಲ್ ಅವರು ಈ ಚಿತ್ರದಲ್ಲಿ ನಟಿಸಿದ್ದೇವೆ. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಚಿತ್ರ ಮೂಡಿಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದು ನಾಯಕ ವಿನೋದ್ ಪ್ರಭಾಕರ್ ಹೇಳಿದರು.
ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಪಾರ್ವತಿ. ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ವಿನೋದ್ ಪ್ರಭಾಕರ್ ಅವರು ಹೇಳಿದ ಹಾಗೆ “ರಾಬರ್ಟ್” ಚಿತ್ರದ ನಂತರ ನಾನು ಹಾಗೂ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದೇವೆ ಎಂದು ನಾಯಕಿ ಸೋನಾಲ್ ಮೊಂತೆರೊ ತಿಳಿಸಿದರು.
ನಮ್ಮ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಕೇಶವ್ ಆರ್(ದೇವಸಂದ್ರ). ನಟ ಕಾಕ್ರೋಜ್ ಸುಧೀ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಸಂಗೀತ ನಿರ್ದೇಶಕ ಪ್ರದ್ಯೋತನ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು. ಚಿತ್ರತಂಡದ ಅನೇಕ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಶಿವಣ್ಣ ಬಗ್ಗೆ ಅವಹೇಳನಕಾರಿ ಮಾತು – ಮಡೆನೂರು ಮನು ವಿರುದ್ಧ ಕ್ರಮಕ್ಕೆ ಮುಂದಾದ ಫಿಲ್ಮ್ ಚೇಂಬರ್!
