ಟಾಲಿವುಡ್ ನಟ ವಿಜಯ್ ದೇವರಕೊಂಡ ತೆರೆಮೇಲೆ ರಫ್ ಆ್ಯಂಡ್ ಟಫ್ ಪಾತ್ರ ಮಾಡಿದರೂ ಕೂಡ ರಿಯಲ್ ಲೈಫ್ನಲ್ಲಿ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಮಯ ಸಿಕ್ಕಾಗಲೆಲ್ಲ ಅವರು ಕುಟುಂಬದವರ ಜೊತೆ ಕಾಲ ಕಳೆಯುತ್ತಾರೆ.
ಇದೀಗ ವಿಜಯ್ ದೇವರಕೊಂಡ ತಾಯಿ ಮಾಧವಿ ಅವರ ಜೊತೆ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಭಾನುವಾರ (ಫೆ.9) ಮಧ್ಯಾಹ್ನ ಪ್ರಯಾಗ್ರಾಜ್ಗೆ ತೆರಳಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನಟ ವಿಜಯ್ ದೇವರಕೊಂಡ ಸಿನಿಮಾ ಕೆಲಸಗಳಿಗೆ ಬಿಡುವು ನೀಡಿ ಕುಂಭಮೇಳದಲ್ಲಿ ಪಾಲ್ಗೊಂಡಿದ್ದು, ಕೇಸರಿ ಬಟ್ಟೆ ಹಾಗೂ ರುದ್ರಾಕ್ಷಿ ಮಾಲೆ ಧರಿಸಿ ಕಾಣಿಸಿಕೊಂಡಿದ್ದಾರೆ. ತಾಯಿ ಮಾಧವಿ ಜೊತೆ ವಿಜಯ್ ದೇವರಕೊಂಡು ಅವರು ತ್ರಿವೇಣಿ ಸಂಗಮದಲ್ಲಿ ಮುಳುಗಿ ಪ್ರಾರ್ಥನೆ ಮಾಡುತ್ತಿರುವ ಫೋಟೋಗಳು ಸದ್ಯ ವೈರಲ್ ಆಗುತ್ತಿದೆ. ಇದಕ್ಕೂ ಮುನ್ನ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಫೋಟೋಗಳು ಕೂಡ ವೈರಲ್ ಆಗಿದ್ದವು.
ಇನ್ನು ವಿಜಯ್ ದೇವರಕೊಂಡ ಅವರ 12ನೇ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿದೆ. ಸದ್ಯಕ್ಕೆ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಬಹಿರಂಗ ಆಗಿಲ್ಲ. ತಾತ್ಕಾಲಿಕವಾಗಿ ‘VD12’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದ ಶೀರ್ಷಿಕೆ ಮತ್ತು ಟೀಸರ್ ಫೆಬ್ರವರಿ 12ರಂದು ಅನಾವರಣ ಆಗಲಿದೆ. ಅದಕ್ಕೂ ಮುನ್ನ ವಿಜಯ್ ದೇವರಕೊಂಡ ಅವರು ಮಹಾಕುಂಭಮೇಳದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
