ಬೆಂಗಳೂರು : ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮಂಡ್ಯದಲ್ಲಿ ಮಗು ಮೃತಪಟ್ಟ ಘಟನೆ ಕರ್ನಾಟಕದಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿದೆ. ಇದೀಗ ಆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ಪೊಲೀಸರಿಗೆ ಖಡಕ್ ಸೂಚನೆಯನ್ನೂ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಸಂಭವಿಸಿದ ಘಟನೆ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತಹದ್ದು, ಘಟನೆ ಸಂಬಂಧ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಮತ್ತೆ ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಇವತ್ತು ಸಭೆ ಕರೆದಿದ್ದೇನೆ, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಮಂಡ್ಯದ ಘಟನೆಯಲ್ಲಿ ಪೊಲೀಸರು ಮಾನವೀಯತೆ ತೋರಲಿಲ್ಲ, ಸ್ವಂತಿಕೆ ಪ್ರದರ್ಶಿಸಲಿಲ್ಲ. ಸರಿಯಾಗಿ ನಡೆದುಕೊಳ್ಳಲಿಲ್ಲ ಎಂದು ಹೇಳಿದರು. ಪೊಲೀಸರು ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯೋದು ಬೇಡ. ಎಲ್ಲೋ ಮೂಲೆಯಲ್ಲಿ ನಿಂತು ಏಕಾಏಕಿ ಬಂದು ತಡೀತಾರೆ.. ಈ ರೀತಿ ಮಾಡಬಾರದು, ಅದಕ್ಕೇ ಆದ ಒಂದು ಪದ್ಧತಿ ಇದೆ. ಆ ಪದ್ಧತಿಯನ್ನು ಪೊಲೀಸರು ಅನುಸರಿಸಬೇಕು. ಡ್ರಿಂಕ್ & ಡ್ರೈವ್, ಹೆಲ್ಮೆಟ್ ಧರಿಸದೇ ವಾಹನ ಚಾಲನೆ.. ಇದರೆಲ್ಲದರ ವಿರುದ್ಧ ಯಾವ ರೀತಿ ಕ್ರಮ ತಗೋಬೇಕೋ ಹಾಗೇ ತಗೋಬೇಕು. ಜಾಗೃತಿ ಮೂಡಿಸಬೇಕು ಎಂದು ಪರಮೇಶ್ವರ್ ಅವರು ಪೊಲೀಸರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ವಾಹನ ಸವಾರರು ಸ್ಪೀಡಾಗಿ ಬರ್ತಿರ್ತಾರೆ, ಆಗ ಹೋಗಿ ತಡೆಯುವ ಕೆಲಸ ಪೊಲೀಸರು ಮಾಡ್ತಾರೆ. ಇದು ನಿಲ್ಲಬೇಕು. ಇವತ್ತು ಇದೆಲ್ಲದರ ಬಗ್ಗೆ ಚರ್ಚಿಸಿ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಡ್ತೇವೆ ಎಂದು ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ನಿನ್ನೆ ಪೋಷಕರು ಮಗುವಿಗೆ ನಾಯಿ ಕಚ್ಚಿದೆ ಕರ್ಕೊಂಡು ಹೋಗ್ತಿದೀವಿ ಅಂತಿದ್ರೂ ಪೊಲೀಸರು ಬಿಡಲಿಲ್ಲ. ಇಂಥ ಸಂದರ್ಭಗಳಲ್ಲಿ ಪೊಲೀಸರು ಸ್ವಂತಿಕೆ ಪ್ರದರ್ಶನ ಮಾಡಬೇಕು, ಸ್ವಂತ ನಿರ್ಧಾರ ತಗೋಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಖಡಕ್ ಅಧಿಕಾರಿ ಕೆ.ಆರ್. ರಕ್ಷಿತ್ ನೇಮಕ!
