ಬೆಂಗಳೂರು : ದುಬಾರಿ ದುನಿಯಾದಲ್ಲಿ ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. BMTC, ಮೆಟ್ರೋ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಆಟೋ ಸರದಿ ಬಂದಿದೆ. ಹೌದು.. ಆಟೋ ಪ್ರಯಾಣ ದರ ಏರಿಕೆ ಮಾಡಲು ಈಗಾಗಲೇ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಅಧಿಕೃತ ದರ ಏರಿಕೆ ಪಟ್ಟಿ (ಮೇ28) ನಾಳೆಯೇ ಹೊರಬೀಳುವ ಸಾಧ್ಯತೆಯಿದೆ.
ಅಧಿಕೃತ ಆದೇಶದ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ನಾಳೆ ಸಭೆ ಕರೆದಿದ್ದಾರೆ. ಸಭೆಯಲ್ಲಿ ಆರ್ಟಿಓ ಕಮಿಷನರ್ ಸೇರಿ ಎಲ್ಲಾ ವಲಯ ಆರ್ಟಿಓ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಆಟೋ ಯೂನಿಯನ್ನ ಕನಿಷ್ಠ ಇಬ್ಬರು ಸದಸ್ಯರು ಸಭೆಗೆ ಬರುವಂತೆ ಪತ್ರ ಬರೆಯಲಾಗಿದೆ. ಅಂತಿಮವಾಗಿ ಸಭೆ ನಡೆದ ಬಳಿಕ ಆಟೋ ಮೀಟರ್ ದರ ಏರಿಕೆ ಪಟ್ಟಿ ಅಧಿಕೃತವಾಗಿ ಹೊರಬೀಳುವ ಸಾಧ್ಯತೆಯಿದೆ.
ಬೆಂಗಳೂರು ನಗರದಲ್ಲಿ ಆಟೋ ಮೀಟರ್ ದರ ಏರಿಕೆ ಮಾಡುವಂತೆ ಕಳೆದ ಮೂರು ವರ್ಷಗಳಿಂದ ಆಟೋ ಚಾಲಕ ಹಾಗೂ ಮಾಲೀಕರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿತ್ತು. ಇದೀಗ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಆಟೋ ಚಾಲಕರ ಮನವಿಯನ್ನು ಪುರಸ್ಕರಿಸಿ, ಆಟೋ ದರ ಏರಿಕೆ ಮಾಡಲು ಮನಸ್ಸು ಮಾಡಿದೆ.
ಈಗೆಷ್ಟಿದೆ ಆಟೋ ಪ್ರಯಾಣ ದರ? ಸದ್ಯ ಬೆಂಗಳೂರಿನಲ್ಲಿ ಕನಿಷ್ಠ ದರ 30 ರೂಪಾಯಿ ಹಾಗೂ ನಂತರ ಪ್ರತಿ ಕಿಲೋ ಮೀಟರ್ಗೆ 15 ರೂಪಾಯಿ ದರ ಇದೆ. ಇದೀಗ ಪರಿಷ್ಕೃತ ದರ ಪಟ್ಟಿ ಪ್ರಕಾರ ಕನಿಷ್ಠ ದರ 30 ರಿಂದ 35 ರೂಪಾಯಿಗೆ, ಅಂದರೆ ಐದು ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ. ನಂತರದ ಪ್ರತಿ ಕಿಲೋ ಮೀಟರ್ ದರ 15 ರಿಂದ 18 ರೂಪಾಯಿಗೆ, ಅಂದರೆ ಮೂರು ರೂಪಾಯಿ ಏರಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.
