ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಮತ್ತೆ ಹೆಚ್ಚಾಗುತ್ತಿವೆ. 47 ಇದ್ದ ಕೋವಿಡ್ ಪ್ರಕರಣಗಳು ಇದೀಗ ರಾಜ್ಯದಲ್ಲಿ 80ಕ್ಕೆ ಏರಿಕೆ ಆಗಿವೆ. ಕಳೆದ 24 ಗಂಟೆಯಲ್ಲಿ ಮತ್ತೆ 37 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಇದರೊಂದಿಗೆ ಇದೀಗ ಸೋಂಕಿತರ ಸಂಖ್ಯೆ 80ಕ್ಕೆ ಹೆಚ್ಚಳವಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮಾತ್ರ 73 ಪ್ರಕರಣ ದಾಖಲು ಆಗಿವೆ. ಒಟ್ಟು 191 ಜನರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 73 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ. ಬೆಂಗಳೂರು ನಗರ ಬಿಟ್ಟರೇ ಬೆಂಗಳೂರು ಗ್ರಾಮಾಂತರದಲ್ಲಿ ಇಬ್ಬರಿಗೆ ಪಾಸಿಟಿವ್ ಆಗಿದೆ. ದಕ್ಷಿಣ ಕನ್ನಡದಲ್ಲಿ ಒಂದು ಪಾಸಿಟಿವ್, ಮೈಸೂರು ಭಾಗದಲ್ಲಿ 3 ಪಾಸಿಟಿವ್ ಹಾಗೂ ವಿಜಯನಗರದಲ್ಲಿ ಒಂದು ಪಾಸಿಟಿವ್ ಆಗಿದೆ.
ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದ್ದು, ರಾಜ್ಯ ಸರ್ಕಾರ ಅಲರ್ಟ್ ಘೋಷಿಸಿದೆ. ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಅಗತ್ಯ ಬಿದ್ರೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಕೋವಿಡ್ ಸ್ಥಿತಿಗತಿ ನೋಡಿಕೊಂಡು ಕಠಿಣ ರೂಲ್ಸ್ ಜಾರಿ ಮಾಡುವ ಚಿಂತನೆಯಲ್ಲಿದೆ. ರೂಪಾಂತರಿ ರೂಪದಲ್ಲಿ ಅಬ್ಬರಿಸ್ತಿರೋ ಕೊರೊನಾಗೆ ಕಡಿವಾಣ ಹಾಕಲು ಸರ್ಕಾರ ಸಕಲ ತಯಾರಿ ಮಾಡಿಕೊಳ್ತಿದೆ. ಹಿಂದಿನ ಪರಿಸ್ಥಿತಿ ಉದ್ಭವಿಸಿದ್ರೆ ಯುದ್ಧೋಪಾದಿಯಲ್ಲಿ ನುಗ್ಗುವಂತೆ ಆರೋಗ್ಯ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ.
ಶೀತ-ಜ್ವರ ಇದ್ದ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಶಾಲೆಗಳೂ ಕೂಡ ಇಂಥ ಮಕ್ಕಳಿಗೆ ರಜೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣಗೆ ಮತ್ತೊಂದು ಸಂಕಷ್ಟ – ಅಶ್ಲೀಲ ವಿಡಿಯೋಗಳ ಬಗ್ಗೆ ಕೋರ್ಟ್ನಲ್ಲಿ ಸ್ಫೋಟಕ ಸಾಕ್ಷಿ ಬಿಚ್ಚಿಟ್ಟ ಕಾರು ಡ್ರೈವರ್!
