ದೆಹಲಿ : ಭರವಸೆಯ ಬ್ಯಾಟರ್ ಹ್ಯಾನ್ರಿಕ್ ಕ್ಲಾಸೇನ್ ಬಾರಿಸಿದ ಶತಕ ಹಾಗೂ ಆರಂಭಿಕ ಸ್ಫೋಟಕ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಸಿಡಿಸಿದ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿದೆ. ಈ ಮೂಲಕ 18ನೇ ಆವೃತ್ತಿಯ ಲೀಗ್‌ಗೆ ಕಳೆದ ಬಾರಿಯ ರನ್ನರ್ ಅಪ್ ಹೈದರಾಬಾದ್ ಗೆಲುವಿನ ವಿದಾಯ ಹೇಳಿದೆ. ಕೆಕೆಆರ್ ಕೊನೆಯ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿದೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಲೀಗ್ನ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 278 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹಾಲಿ ಚಾಂಪಿಯನ್ ಕೆಕೆಆರ್ ಆಡಿದ 18.3 ಓವರ್‌ಗಳಲ್ಲಿ 168 ರನ್ ಸಿಡಿಸಿ ಆಲೌಟ್ ಆಯಿತು. ಈ ಮೂಲಕ ಹೈದರಾಬಾದ್ ಆಡಿದ 14 ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು, 13 ಅಂಕಗಳನ್ನು ಕಲೆ ಹಾಕಿದೆ. ಕೆಕೆಆರ್ 12 ಅಂಕಗಳೊಂದಿಗೆ ಟೂರ್ನಿಗೆ ಗುಡ್ ಬಾಯ್ ಹೇಳಿದೆ.
ಹ್ಯಾನ್ರಿಕ್ ಕ್ಲಾಸೆನ್ ಅಬ್ಬರ : ಕ್ಲಾಸೆನ್ ತಮ್ಮ ಐಪಿಎಲ್ ವೃತ್ತಿ ಜೀವನದ ಎರಡನೇ ಶತಕ ಬಾರಿಸಿದರು. ಇವರು 39 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್ ನೆರವಿನಿಂದ ಅಜೇಯ 105 ರನ್ ಸಿಡಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ ಶತಕ ಬಾರಿಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರು 37 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು.
ಇದನ್ನೂ ಓದಿ : ಕೊಡಗಿನಲ್ಲಿ ಮುಂದುವರೆದ ವರುಣನ ಆರ್ಭಟ – ವಿಶ್ವವಿದ್ಯಾನಿಲಯ ಕಾಲೇಜುಗಳಿಗೆ 2 ದಿನ ರಜೆ ಘೋಷಣೆ!
