ಕರಾವಳಿ ಭಾಗದ ಪ್ರೇಮಕಥೆ ‘ಮಾರ್ನಮಿ’ಗೆ ಮೋಹಕ ತಾರೆ ಸಾಥ್ – ಚೈತ್ರಾ ಆಚಾರ್ ರೋಲ್ ರಿವೀಲ್!

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಚೈತ್ರಾ ಜೆ ಆಚಾರ್ ಕೂಡ ಒಬ್ಬರು.‌ ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಹೊಂದಿರುವ ನಟಿ ಈಗ ಮಾರ್ನಮಿಗೆ ಮದುವೆಯಾಗೋದಿಕ್ಕೆ ಹೊರಟಿದ್ದಾರೆ. ಅರೇ! ಚೈತ್ರಾ ಮದುವೆನಾ ಅಂತಾ ಹುಬ್ಬೇರಿಸಬೇಡಿ. ಮದುವೆ‌ ನಿಜವೇ ಆದರೆ ರೀಲ್​ನಲ್ಲಿ. ಕರಾವಳಿ ಭಾಗದ ಪ್ರೇಮಕಥೆಯುಳ್ಳ ಮಾರ್ನಮಿ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಪಾತ್ರದ ಪರಿಚಯದ ಟೀಸರ್ ಬಿಡುಗಡೆ ಮಾಡಲಾಗಿದೆ.

ಗುನಾಧ್ಯ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್​ನಲ್ಲಿ ಚೈತ್ರಾ ಪಾತ್ರದ ಝಲಕ್ ಬಿಡುಗಡೆ ಮಾಡಲಾಗಿದೆ. ಮಾರ್ನಮಿ ಸಿನಿಮಾದಲ್ಲಿ ಚೈತ್ರಾ, ದೀಕ್ಷಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ತನ್ನ ಪ್ರೀತಿ,‌ ಮದುವೆ ಬಗ್ಗೆ ಕರಾವಳಿ ಭಾಷೆಯಲ್ಲಿ ಪರಿಚಯ ಮಾಡಿಕೊಳ್ಳುತ್ತಾರೆ. ಡಿ ಗ್ಲಾಮ್ ಲುಕ್​ನಲ್ಲಿ ಚೈತ್ರಾ ಆಚಾರ್ ಕಾಣಿಸಿಕೊಂಡಿದ್ದಾರೆ. ಮೋಹಕ ತಾರೆ ರಮ್ಯಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಟೀಸರ್ ಬಿಡುಗಡೆ ಮಾಡಿ‌ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಕುಂದಾಪುರದ ಪಡುಕೋಣೆಯ ರಿಶಿತ್ ಶೆಟ್ಟಿ ಮಾರ್ನಮಿ ಸಿನಿಮಾದ ಸೂತ್ರಧಾರ. ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷ ಸಂಸ್ಕೃತಿಯ ಎಳೆ ಜೊತೆಗೆ ಪ್ರೇಮಕಥೆ, ಆಕ್ಷನ್, ಎಮೋಷನ್, ಕಾಮಿಡಿ ಮಿಶ್ರಣದ ಮಾರ್ನಮಿ ಚಿತ್ರವನ್ನು ಗುನಾಧ್ಯ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾದಲ್ಲಿ ರಿತ್ವಿಕ್ ಮಠದ್ ನಾಯಕನಾಗಿ ಅಭಿನಯಿಸಿದ್ದಾರೆ. ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರ ಶೆಟ್ಟಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : ಬಾಗಲಕೋಟೆಯಲ್ಲಿ ಮುಸುಕುಧಾರಿ ಕಳ್ಳರಿಂದ ಸರಣಿ ಮನೆಗಳ್ಳತನ – 3 ಲಕ್ಷ ನಗದು, ಚಿನ್ನಾಭರಣ ದೋಚಿದ ಖತರ್ನಾಕ್ ಕಳ್ಳರು!

Btv Kannada
Author: Btv Kannada

Read More