ರಾಜ್ಯದ ನೂತನ DG-IGPಯಾಗಿ ಅಧಿಕಾರ ಸ್ವೀಕರಿಸಿದ ಕನ್ನಡಿಗ ಡಾ.ಎಂ.ಎ.ಸಲೀಂ ಭೇಟಿ ಮಾಡಿದ ಕರವೇ ಅಧ್ಯಕ್ಷ ನಾರಾಯಣ ಗೌಡ!

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಡಿಜಿ-ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಅಪ್ಪಟ ಕನ್ನಡಿಗ, ಕನ್ನಡಾಭಿಮಾನಿ ಡಾ.ಎಂ.ಎ.ಸಲೀಂ ಅವರನ್ನು ಶನಿವಾರ ಕರವೇ ಅಧ್ಯಕ್ಷ ನಾರಾಯಣ ಗೌಡ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಕರವೇ ಅಧ್ಯಕ್ಷ ನಾರಾಯಣ ಗೌಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡು, ಕರ್ನಾಟಕ ಪೊಲೀಸ್‌ ಇಲಾಖೆಯ ಹಿರಿಮೆಯನ್ನು ಡಾ.ಎಂ.ಎ.ಸಲೀಂ ಅವರು ಇನ್ನಷ್ಟು ಬೆಳೆಸಲಿ ಎಂದು ಹಾರೈಸಿದ್ದಾರೆ. ಮೂಲತಃ ಬೆಂಗಳೂರಿನ ಚಿಕ್ಕಬಾಣವಾರದವರಾದ ಡಾ.ಸಲೀಂ ಅವರು 1993ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿ, ರಾಜ್ಯದ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸಮರ್ಥವಾಗಿ ಸೇವೆ ಸಲ್ಲಿಸಿ, ಅಪಾರ ಅನುಭವ ಮತ್ತು ಗೌರವವನ್ನು ಗಳಿಸಿದ್ದಾರೆ. ಅನೇಕ ವಿಶೇಷ ತನಿಖಾ ದಳಗಳ ಮುಖ್ಯಸ್ಥರಾಗಿ, ಅವುಗಳ ಭಾಗವಾಗಿ ಕಾರ್ಯ ನಿರ್ವಹಿಸಿ ದಕ್ಷತೆಯನ್ನು ಮೆರೆದಿದ್ದಾರೆ. ಅವರ ನಾಯಕತ್ವದಲ್ಲಿ ಕರ್ನಾಟಕ ಪೊಲೀಸ್‌ ಇಲಾಖೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ ಎಂಬ ನಂಬುಗೆ ನನ್ನದು ಎಂದಿದ್ದಾರೆ.

ಪೊಲೀಸ್‌ ಮಹಾನಿರ್ದೇಶಕರ ಹುದ್ದೆಗೆ ಕನ್ನಡಿಗರೇ ನೇಮಕವಾದಲ್ಲಿ ಅವರು ಕನ್ನಡಿಗರ ನಾಡಿಮಿಡಿತವನ್ನು ಗ್ರಹಿಸಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಹಿಂದೆ ಪೊಲೀಸ್‌ ಕಮಿಷನರ್‌ ಆಗಿದ್ದವರೊಬ್ಬರು ಬೆಂಗಳೂರಿನ ಪೊಲೀಸರು ಪರಭಾಷಿಗರ ಅನುಕೂಲಕ್ಕಾಗಿ ಇತರ ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ಆದೇಶವೊಂದನ್ನು ಹೊರಡಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದಿಂದಾಗಿ ಕೊನೆಗೆ ಅದನ್ನು ಹಿಂದಕ್ಕೆ ಪಡೆಯಬೇಕಾಯಿತು. ಡಾ. ಎಂ.ಎ. ಸಲೀಂ ಅಂಥವರು ಉನ್ನತ ಮಟ್ಟದ ಹುದ್ದೆಗೇರಿದರೆ ಇಂಥ ಅಧಿಕಪ್ರಸಂಗಗಳು ನಡೆಯುವುದಿಲ್ಲ. ಹೀಗಾಗಿಯೇ ಆಯಕಟ್ಟಿನ ಜಾಗಗಳಿಗೆ ಕನ್ನಡಿಗ ಅಧಿಕಾರಿಗಳನ್ನೇ ನೇಮಕ ಮಾಡಿ ಎಂದು ನಾನು ಮೊದಲಿನಿಂದಲೂ ಸರ್ಕಾರಗಳನ್ನು ಒತ್ತಾಯಿಸುತ್ತ ಬಂದಿದ್ದೇನೆ.

ಡಾ. ಎಂ.ಎ. ಸಲೀಂ ಅವರು ಒಳ್ಳೆಯ ಬರೆಹಗಾರರು ಮಾತ್ರವಲ್ಲ, ಪುಸ್ತಕಪ್ರೇಮಿಯೂ ಹೌದು. ಕರ್ನಾಟಕದ ಸಾಂಸ್ಕೃತಿಕ ಹಿರಿಮೆಯನ್ನು ಅವರು ಬಲ್ಲರು. ನಾನು ಗಮನಿಸಿದಂತೆ ಅವರೊಬ್ಬ ಮಾದರಿ ಪೊಲೀಸ್‌ ಅಧಿಕಾರಿ. ಅವರಿಗೆ ಮತ್ತೊಮ್ಮೆ ಅಭಿನಂದನೆಗಳು, ರಾಜ್ಯದ ಶಾಂತಿ, ಸುರಕ್ಷತೆ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಅವರ ಕಾರ್ಯದಲ್ಲಿ ಯಶಸ್ಸು ಒಲಿಯಲಿ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ರಾಜ್ಯಾದ್ಯಂತ ಗಾಳಿ ಸಹಿತ ಭಾರೀ ಮಳೆ – ಈ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಣೆ!

Btv Kannada
Author: Btv Kannada

Read More