ಬೆಂಗಳೂರು : ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2024ಕ್ಕೆ ಸಹಿ ಹಾಕಲು ನಿರಾಕರಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಷ್ಟ್ರಪತಿಗಳಿಗೆ ಅವಗಾಹನೆಗೆ ಶಿಫಾರಸು ಮಾಡಿದ್ದಾರೆ. ಈ ಮೂಲಕ ಸರ್ಕಾರದ ಪ್ರಸ್ತಾಪ, ಸ್ಪಷ್ಟನೆ ಮತ್ತು ಮನವರಿಕೆಗೆ ಬಗ್ಗದ ರಾಜ್ಯಪಾಲರು ಎಚ್ಚರಿಕೆ ನಡೆ ಅನುಸರಿಸಿದ್ದಾರೆ.
ಈ ವಿದೇಯಕವು 2024 ಫೆಬ್ರವರಿಯಲ್ಲಿ ವಿಧಾನಸಭೆಯಲ್ಲಿ ಮಂಡನೆಯಾಗಿತ್ತು. ಪ್ರತಿಪಕ್ಷ ಬಿಜೆಪಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ವಿಧಾನಸಭೆಯಲ್ಲಿ ಸಂಖ್ಯಾಬಲದ ಆಧಾರದ ಮೇಲೆ ಅಂಗೀಕರಿಸಿದರೂ ವಿಧಾನ ಪರಿಷತ್ ನಲ್ಲಿ ವಿಧೇಯಕ ತಿರಸ್ಕೃತಗೊಂಡಿತ್ತು.
ಸರ್ಕಾರ ಪುನಃ ಫೆ.29ರಂದು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿತ್ತು. ಮುಂದಿನ ಪ್ರಕ್ರಿಯೆಯಾಗಿ ರಾಜ್ಯಪಾಲರಿಗೂ ಕಳುಹಿಸಿತ್ತು. ವಿಧೇಯಕದ ಬಗ್ಗೆ ರಾಜ್ಯಪಾಲರು ಎರಡು ಬಾರಿ ಸ್ಪಷ್ಟನೆ ಕೇಳಿದ್ದು, ಈ ಮಸೂದೆ ಸಂವಿಧಾನಾತ್ಮಕವಾಗಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದರು. ಇಷ್ಟಾದ ಮೇಲೂ ಸರ್ಕಾರ ಪುನಃ ತನ್ನ ನಿಲುವಲ್ಲಿ ಬದಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿತು. ಹೀಗಾಗಿ ರಾಜ್ಯಪಾಲರು ವಿಧೇಯಕಕ್ಕೆ ಸಹಿ ಹಾಕದೇ ತಮ್ಮ ಅಸಮ್ಮತಿ ದಾಖಲಿಸುವ ಜತೆಗೆ ಇದೀಗ ರಾಷ್ಟ್ರಪತಿ ಅಂಗಳಕ್ಕೆ ಕಳಿಸಿದ್ದಾರೆ.
ಮಸೂದೆ ಮುಖ್ಯಾಂಶ
- ಉತ್ತಮ ಆದಾಯ ಹೊಂದಿದ ದೇವಾಲಯಗಳಿಂದ ನಿಗದಿತ ಹಣ ಕ್ರೋಡೀಕರಿಸಿ ಸಾಮಾನ್ಯ ನಿಧಿ ಸ್ಥಾಪನೆ.
- ಅಧಿಸೂಚಿತ ಸಂಸ್ಥೆಯ ವ್ಯವಸ್ಥಾಪನಾ 2 ಸಮಿತಿಯಲ್ಲಿ ಪಶ್ವಕರ್ಮ ದೇವಾಲಯ ವಾಸ್ತುಶಿಲ್ಪ ಮತ್ತು ಶಿಲ್ಪಶಾಸ್ತ್ರದಲ್ಲಿ ಕೌಶಲ್ಯವುಳ್ಳ ವ್ಯಕ್ತಿಯನ್ನು ಸೇರಿಸುವುದು.
- ಆಡಳಿತ ಮಂಡಳಿ ಅಧ್ಯಕ್ಷರನ್ನು ನೇಮಿಸಲು ಧಾರ್ಮಿಕ ಪರಿಷತ್‌ಗೆ ಅಧಿಕಾರ.
- ಗ್ರೂಪ್-ಎ ದೇವಾಲಯಗಳ ಅಧಿಕಾರ *ಕ್ಷೇತ್ರ ವ್ಯಾಪ್ತಿಯೊಳಗೆ ಯಾತ್ರಾರ್ಥಿಗಳಿಗೆ ಸುರಕ್ಷತೆ ಕಲ್ಪಿಸಲು, ಅಭಿವೃದ್ಧಿ, ನಿರ್ಮಾಣ ಮತ್ತು ನಿರ್ವಹಣೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು, ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಮಟ್ಟದ ಮತ್ತು ರಾಜ್ಯದ ಉನ್ನತ ಮಟ್ಟದ ಸಮಿತಿ ರಚನೆ.
- ರಾಜ್ಯಪಾಲರ ನಿಲುವು ಏನು? ಹೈಕೋರ್ಟ್‌ನಲ್ಲಿ ತಿರಸ್ಕೃತ ಸುಪ್ರಿಂನಲ್ಲಿ ಬಾಕಿ ಇರುವ ವಿಚಾರವನ್ನು ಕಾಯ್ದೆ ಮಾಡುವುದು ಎಷ್ಟು ಸರಿ ಎನ್ನುವುದು ವಿಧೇಯಕಕ್ಕೆ ರಾಜ್ಯಪಾಲರ ಪ್ರಮುಖ ಆಕ್ಷೇಪವಾಗಿದೆ
ಇದನ್ನೂ ಓದಿ : ಸರ್ಕಾರಿ ಅಧಿಕಾರಿಗೆ ಗನ್ ತೋರಿಸಿ ಬೆದರಿಕೆ – BJP ನಾಯಕನ ಶಾಸಕ ಸ್ಥಾನ ರದ್ದು!
