ಇಂದು ಸಿಇಟಿ ಫಲಿತಾಂಶ – ಎಷ್ಟು ಗಂಟೆಗೆ? ರಿಸಲ್ಟ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಡೀಟೇಲ್ಸ್!

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸಿದ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (UGCET) ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಲಿದೆ. ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಬೆಳಿಗ್ಗೆ 11:30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಫಲಿತಾಂಶವನ್ನು ಘೋಷಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 11:15ಕ್ಕೆ ಸುದ್ದಿಗೋಷ್ಟಿ ಆಯೋಜಿಸಲಾಗಿದೆ. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಫಲಿತಾಂಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.

ಫಲಿತಾಂಶವು ಮಧ್ಯಾಹ್ನ 2 ಗಂಟೆಯಿಂದ ಕೆಇಎನ ಅಧಿಕೃತ ವೆಬ್‌ಸೈಟ್‌ಗಳಾದ https://cetonline.karnataka.gov.in/ugcetrank2025/checkresult.aspx ಮತ್ತು https://karresults.nic.in ನಲ್ಲಿ ಲಭ್ಯವಿರಲಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಗುಪ್ತಪದವನ್ನು ಬಳಸಿಕೊಂಡು ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶದಲ್ಲಿ ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ಪರೀಕ್ಷೆಯಲ್ಲಿ ಪಡೆದ ರ‍್ಯಾಂಕ್‌ನ ವಿವರಗಳು ಒಳಗೊಂಡಿರುತ್ತವೆ. ಫಲಿತಾಂಶದ ಜೊತೆಗೆ ಸರಿಯಾದ ಉತ್ತರ ಕೀ ಮತ್ತು ಫಲಿತಾಂಶವನ್ನು ತಡೆಹಿಡಿಯಲಾದ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಪ್ರಕಟಿಸಲಾಗುವುದು ಎಂದು ಕೆಇಎ ಮಾಹಿತಿ ಹಂಚಿಕೊಂಡಿದೆ.

2025ರ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 15, 16 ಮತ್ತು 17 ರಂದು ನಡೆಸಲಾಗಿತ್ತು. ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 25, 2025ರಂದು ಘೋಷಿಸಲಾಗಿತ್ತು. ಕಳೆದ ವರ್ಷದ ಫಲಿತಾಂಶದ ಆಧಾರದ ಮೇಲೆ, ಹೆಚ್ಚಿನ ಬಾಲಕಿಯರು (1,29,780) ಬಾಲಕರಿಗಿಂತ (1,14,565) ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಈ ವರ್ಷವೂ ಸಹ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಕೆಇಎ ಮಾಹಿತಿ ನೀಡಿದೆ.

CET ಪರೀಕ್ಷೆಯು ಇಂಜಿನಿಯರಿಂಗ್, ಫಾರ್ಮಸಿ, ಕೃಷಿ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸುತ್ತದೆ. ಫಲಿತಾಂಶದ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳು ಕೆಇಎ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಕೌನ್ಸೆಲಿಂಗ್ ಪ್ರಕ್ರಿಯೆಯು ಆನ್‌ಲೈನ್ ನೋಂದಣಿ, ದಾಖಲೆ ಪರಿಶೀಲನೆ, ಕಾಲೇಜು ಆಯ್ಕೆ ಮತ್ತು ಸೀಟು ಹಂಚಿಕೆಯನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ : ಮೆಟ್ರೋದಲ್ಲಿ ಹುಡುಗಿಯರ ವಿಡಿಯೋ ರೆಕಾರ್ಡ್ ಮಾಡಿ ವಿಕೃತಿ ಮರೆದಿದ್ದ ಕಿಡಿಗೇಡಿ ಅರೆಸ್ಟ್!

Btv Kannada
Author: Btv Kannada

Read More