ಪೊಲೀಸ್​ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳಿಗೆ ಸುದೀರ್ಘ ಪತ್ರ ಬರೆದ ನೂತನ DG-IGP ಡಾ. ಎಂ.ಎ ಸಲೀಂ!

ಬೆಂಗಳೂರು : ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿರುವ ಕನ್ನಡಿಗ, ಹಿರಿಯ ಐಪಿಎಸ್​ ಅಧಿಕಾರಿ ಡಾ.ಎಂ.ಎ ಸಲೀಂ ಅವರು ತಮ್ಮ ಸಹೋದ್ಯೋಗಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಅಪರಾಧಗಳ ನಿಯಂತ್ರಣ, ಹಾಗೂ ಹೆಚ್ಚು ಸುರಕ್ಷಿತ ವಾತಾವರಣ ನಿರ್ಮಿಸಲು ರಾಜ್ಯ ಪೊಲೀಸ್​ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಪತ್ರದಲ್ಲೇನಿದೆ…?

ಪ್ರಿಯ ಸಹೋದ್ಯೋಗಿಗಳೇ,

ಪ್ರಪ್ರಥಮವಾಗಿ ನನ್ನೆಲ್ಲ ಸಹೋದ್ಯೋಗಿಗಳಿಗೆ ನಾನು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಕರ್ನಾಟಕ ರಾಜ್ಯ ಪೊಲೀಸ್​ ಪಡೆಯ ಮುಖ್ಯಸ್ಥನಾಗಿ ಅಧಿಕಾರವನ್ನು ವಹಿಸಿಕೊಂಡಿರುವುದು ನನಗೆ ಅಪಾರ ಸಂತಸ ತಂದಿದೆ. ನಮ್ಮ ನಾಡಿನಲ್ಲಿ ಶಾಂತಿ – ಸೌಹಾರ್ದಯುತ, ಸುರಕ್ಷತೆಯ ವಾತಾವರಣ ನಿರ್ಮಿಸುವ ಹಾಗೂ ಇಲಾಖೆಯನ್ನು ಸಮಾಜ ಸ್ನೇಹಿಯಾಗಿ ಬದಲಿಸಿ, ಇಲಾಖೆಯನ್ನು ಆಧುನೀಕರಣದೆಡೆಗೆ ಕೊಂಡೊಯ್ಯಲು ನಮ್ಮೆಲ್ಲ ಸಾಮರ್ಥ್ಯ ಮೀರಿ ದುಡಿಯುವ ಧೈಯದೆಡೆಗೆ ನಾವೆಲ್ಲರೂ ಒಮ್ಮತವಾಗಿ ಕಾರ್ಯಪ್ರವೃತ್ತರಾಗೋಣ.

ಈ ಗುರಿಸಾಧನೆಗೆ, ಪೊಲೀಸ್​ ಇಲಾಖೆಯ ಅಡಿಪಾಯವಾಗಿರುವ ಕಿರಿಯ ಪೊಲೀಸ್​ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಹಿಡಿದು ಹಿರಿಯ ಪೊಲೀಸ್ ಅಧಿಕಾರಿಗಳವರೆಗಿನ ಎಲ್ಲ ಸಹೋದ್ಯೋಗಿಗಳಿಂದ ಸದಾಕಾಲವೂ ನಿರಂತರ ಬೆಂಬಲವನ್ನು ಅಪೇಕ್ಷಿಸುತ್ತೇನೆ. ಪೊಲೀಸ್ ಇಲಾಖೆಯ ಕ್ರಿಯಾಶೀಲತೆ ಮತ್ತು ಸಾಮರ್ಥ್ಯ ಹೆಚ್ಚಿಸುವ ಹಲವು ಪರಿಕಲ್ಪನೆಗಳನ್ನು ನಾವೆಲ್ಲರೂ ಅನುಷ್ಠಾನಗೊಳಿಸಬೇಕಾಗಿದೆ.

1. ಕಾನೂನು-ಸುವ್ಯವಸ್ಥೆ, ಸೌಹಾರ್ದತೆಗಳನ್ನು ಕಾಪಾಡುವುದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಪರಿಣಾಮಕಾರಿ ಹಾಗೂ ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವುದು. ಕಾನೂನು-ಸುವ್ಯವಸ್ಥೆ ಮತ್ತು ಸೌಹಾರ್ದತೆಗಳಿಗೆ ಅಪಾಯ ತಂದೊಡ್ಡಬಹುದಾದ ವ್ಯಕ್ತಿಗಳ ಮತ್ತು ಶಕ್ತಿಗಳ ವಿರುದ್ಧ ಅವಶ್ಯಕ ಮುನ್ನೆಚ್ಚರಿಕಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು.

2. ಅಪರಾಧಗಳನ್ನು ವ್ಯವಸ್ಥಿತವಾಗಿ ತಡೆಯುವ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಅಪರಾಧ ಪ್ರಕರಣಗಳ ಸಮರ್ಥ ಹಾಗೂ ನಿಖರ ತನಿಖೆಯನ್ನು ನಡೆಸುವ ಮೂಲಕ, ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದನ್ನು ತಡೆದು, ನೊಂದವರಿಗೆ ಶೀಘ್ರ ನ್ಯಾಯ ದೊರಕಿಸಿಕೊಡಲು ಅನುವಾಗುವುದು.

3. ಪ್ರಸ್ತುತದವರೆಗೆ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಅನುಸರಿಸುತ್ತಿದ್ದ ಪಥವಾದ “ಅಪರಾಧಿ ಕೇಂದ್ರಿತ ವ್ಯವಸ್ಥೆ” ಯನ್ನು “ಸಂತ್ರಸ್ತ ಕೇಂದ್ರಿತ ವ್ಯವಸ್ಥೆ”ಯ ಪಥವನ್ನಾಗಿ ಬದಲಿಸಿಕೊಳ್ಳುವುದು. ಇಂತಹ ಕ್ರಮದಿಂದ ಅಪರಾಧಿಗಳಿಗೆ ಶಿಕ್ಷೆಗೆ ಗುರಿಪಡಿಸುವುದರ ಜೊತೆಗೆ, ಸಂತ್ರಸ್ತರಿಗೆ ನ್ಯಾಯ ದೊರಕುವುದರೊಂದಿಗೆ, ಅರ್ಹ ಸವಲತ್ತುಗಳನ್ನು ದೊರಕಿಸಿಕೊಡಲು ಮತ್ತು ಅವರನ್ನು ಪುನಃಶ್ಚೇತನಗೊಳಿಸಲು ಪ್ರಯತ್ನಿಸಬಹುದಾಗಿದೆ.

4. ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕತೆಯಲ್ಲಿ ಎಂದೂ ರಾಜಿಯಾಗಕೂಡದು. ನಮ್ಮೆಲ್ಲ ಸಹೋದ್ಯೋಗಿಗಳಿಂದ ಎಲ್ಲರ ನಿರೀಕ್ಷೆಯೂ ಇದೇ ಆಗಿದೆ. ಸದಾಕಾಲ ನೀವೆಲ್ಲರೂ ಪ್ರಾಮಾಣಿಕತೆಗೆ ಮೊದಲ ಆದ್ಯತೆ ನೀಡುವಿರಿ ಎಂಬ ವಿಶ್ವಾಸವಿದೆ. ಪ್ರತಿಯೊಂದು ಅಧಿಕೃತ ಪ್ರಕ್ರಿಯೆಗಳಲ್ಲೂ ಸಹ ಪಾರದರ್ಶಕತೆಗೆ ಅತಿ ಹೆಚ್ಚು ಒತ್ತು ನೀಡುವುದರಿಂದ ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆ ಮೂಡಿಸುತ್ತವೆ ಮತ್ತು ದುರ್ಬಲ ವರ್ಗ, ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ. ಇಂತಹ ಪ್ರಾಮಾಣಿಕತೆಯ ಸಿದ್ಧಾಂತಗಳು ನಮ್ಮ ನೈತಿಕತೆ ಮತ್ತು ಆತ್ಮತೃಪ್ತಿ ದ್ವಿಗುಣಗೊಳಿಸುತ್ತವೆ.

5. ಉತ್ತಮ ಮಾನವ ಸಂಪನ್ಮೂಲವೇ ಪೊಲೀಸ್ ಇಲಾಖೆಯ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ನಮ್ಮ ಸಹೋದ್ಯೋಗಿಗಳು ಸದೃಢರಾಗಿರಲು ಹಾಗೂ ಆರೋಗ್ಯ ಸ್ಥಿತಿಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವುದು. ನಿಯಮಿತ ವ್ಯಾಯಾಮ, ಕೆಲಸದ ಒತ್ತಡ ನಿವಾರಣೆ, ದೀರ್ಘಕಾಲದ ಕರ್ತವ್ಯಗಳ ವಿಭಜನೆ, ಉತ್ತಮ ಕರ್ತವ್ಯದ ವಾತಾವರಣ ನಿರ್ಮಾಣ, ನೈತಿಕ ಉತ್ಸಾಹ ಹೆಚ್ಚಿಸುವ ಕ್ರಮಗಳು, ವಿನಾಕಾರಣ ರಜೆ ನಿರಾಕರಿಸದಿರುವುದು, ಉತ್ತಮ ಸೇವೆಯನ್ನು ಗುರುತಿಸಿ ಪುರಸ್ಕರಿಸುವುದರಿಂದ, ಅವರು ಪ್ರೇರೇಪಣೆಗೊಂಡು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ಅವರ ಕುಟುಂಬದ ಕ್ಷೇಮಾಭಿವೃದ್ಧಿಗೆ ಒತ್ತು ನೀಡುವ ಆಚರಣೆಗಳನ್ನು ಹಿರಿಯ ಅಧಿಕಾರಿಗಳಾದ ನಾವೆಲ್ಲರೂ ನಮ್ಮ ಆದ್ಯತೆ ಎಂದು ಪರಿಗಣಿಸಿಕೊಳ್ಳುವುದು.

6. ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಪೊಲೀಸರಾದ ನಮ್ಮೆಲ್ಲರ ಹೊಣೆ ಮತ್ತು ನಮ್ಮ ಪ್ರಥಮ ಆದ್ಯತೆ. ಮಹಿಳೆಯರ ಮತ್ತು ಮಕ್ಕಳ ವಿರುದ್ಧ ಚಾಲ್ತಿಯಲ್ಲಿರುವ ಕಾನೂನಿನ ಪರಿಣಾಮಕಾರಿ ಜಾರಿ, ಇಂತಹ ಅಪರಾಧಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಸುರಕ್ಷತೆ ವಾತಾವರಣ ನಿರ್ಮಾಣಕ್ಕಾಗಿ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

7. ನಮ್ಮ ನಾಡಿನ ಯುವಜನತೆಗೆ ಮಾರಕವಾಗಿರುವ ಮಾದಕ ವಸ್ತುಗಳ ವಿರುದ್ಧದ ಸಮರ ನಿರಂತರವಾಗಿರಬೇಕು. ರಾಜ್ಯದಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಸಾಗಣೆ ಹಾಗೂ ಮಾರಾಟಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವುದರೊಂದಿಗೆ, ಮಾದಕ ದ್ರವ್ಯದ ವಿರುದ್ಧ ಆಂದೋಲನಗಳು ಹಾಗೂ ಮದ್ಯ ವ್ಯಸನಕ್ಕೆ ಬಲಿಯಾದ ವ್ಯಕ್ತಿಗಳ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವುದು.

8. ಜೂಜಾಟ, ಮಟ್ಕಾ, ವೇಶ್ಯಾವಾಟಿಕೆಗಳು ಹಾಗೂ ಎಲ್ಲ ರೀತಿಯ ಅನೈತಿಕ ಚಟುವಟಿಕೆಗಳು ನಾಡಿನ ಯಾವುದೇ ಸ್ಥಳದಲ್ಲಿ ನಡೆಯದಂತೆ ಹದ್ದಿನ ಕಣ್ಣಿಡುವುದು ಹಾಗೂ ರೌಡಿ, ಸಮಾಜಘಾತುಕ ಶಕ್ತಿಗಳು ಹಾಗೂ ಇತರ ಸಂಘಟಿತ ಅಪರಾಧಗಳನ್ನು ತಡೆಯಲು ಚಾಲ್ತಿಯಲ್ಲಿರುವ ಕಾನೂನುಗಳನ್ನ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.

9. ತಂತ್ರಜ್ಞಾನ ಆಧಾರಿತ ಇಂದಿನ ಯುಗದಲ್ಲಿ ಭೌತಿಕ ಅಪರಾಧಗಳನ್ನು ಹಿಮ್ಮೆಟ್ಟಿಸಿ, ತೀವ್ರಗತಿಯಲ್ಲಿ ಏರುತ್ತಿರುವ ಸೈಬರ್ ಅಪರಾಧಗಳ ನಾಗಾಲೋಟವನ್ನು ಸಮರ್ಥವಾಗಿ ತಡೆದು, ವಂಚಿತ ಹಣವು ಸಂತ್ರಸ್ತರಿಗೆ ಶೀಘ್ರವಾಗಿ ತಲುಪುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು.

10. ರಸ್ತೆಗಳಲ್ಲಿ ಉತ್ತಮ ಸಂಚಾರ ನಿರ್ವಹಣೆ ಜಾರಿ ಮಾಡುವುದು ಹಾಗೂ ರಸ್ತೆ ಅಪಘಾತಗಳ ಪರಿಣಾಮಕಾರಿ ನಿಯಂತ್ರಣದಿಂದ ಅಮಾಯಕರ ಪ್ರಾಣವನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ನಾವು ಅರಿಯಬೇಕು.

ಸಮಾಜದಲ್ಲಿ ನೆಮ್ಮದಿ ಹೆಚ್ಚಿಸುವ, ಶಾಂತಿ ಸ್ಥಾಪಿಸುವ, ಸುರಕ್ಷಿತ ವಾತಾವರಣ ನಿರ್ಮಿಸುವ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ, ದುರ್ಬಲ ವರ್ಗದವರಿಗೆ ಮತ್ತು ನೊಂದವರಿಗೆ ನ್ಯಾಯ ದೊರಕಿಸಿಕೊಡುವ ವಿಶೇಷ ಅವಕಾಶ ಮತ್ತು ಜವಾಬ್ದಾರಿ ಪೊಲೀಸರಾದ ನಮಗಿದೆ ಎಂಬುದನ್ನು ನಾವು ಎಂದೂ ಮರೆಯಕೂಡದು. ಈ ನಮ್ಮ ನಾಡು ಮತ್ತು ನಾಡಿನ ಜನತೆಯ ಒಳಿತಿಗಾಗಿ ನಾವೆಲ್ಲರೂ ಶಕ್ತಿ ಮೀರಿ, ಪಾರದರ್ಶಕತೆ, ವೃತ್ತಿಪರತೆಯಿಂದ ಸೇವೆ ಸಲ್ಲಿಸಿ, ಕರ್ನಾಟಕ ರಾಜ್ಯವನ್ನು ದೇಶದಲ್ಲೇ ಅತಿ ಹೆಚ್ಚು ಸುರಕ್ಷಿತ ವಾತಾವರಣವಿರುವ ಹಾಗೂ ಅತ್ಯುತ್ತಮ ವಾಸ ಯೋಗ್ಯ ತಾಣವನ್ನಾಗಿ ಪರಿವರ್ತಿಸಲು ಪಣತೊಡೋಣ.

ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.

– ಡಾ|| ಎಂ.ಎ. ಸಲೀಂ

ಇದನ್ನೂ ಓದಿ : ಹೃದಯಸ್ಪರ್ಶಿ ಕಥೆ ಸೇರ್ಪಡೆ – ಹೊಸ ರೂಪದಲ್ಲಿ ‘ಸಂಜು ವೆಡ್ಸ್ ಗೀತಾ -2’ ಜೂ.6ಕ್ಕೆ ತೆರೆಗೆ!

Btv Kannada
Author: Btv Kannada

Read More