ಹಿರಿಯ ವಕೀಲ ಅರುಣ್ ಶ್ಯಾಮ್ ವಾದ – ಅರ್ನಾಬ್ ಗೋಸ್ವಾಮಿ ಪ್ರಕರಣಕ್ಕೆ ತಡೆ!

ಬೆಂಗಳೂರು : ಟರ್ಕಿಯ ಇಸ್ತಾಂಬುಲ್ ಕಾಂಗ್ರೆಸ್ ಕೇಂದ್ರವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಚೇರಿ ಎಂದು ಟ್ವೀಟ್​​ ಮಾಡಿದ್ದ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ಅದನ್ನು ‘ರಿಪಬ್ಲಿಕ್’ ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡಿದ ಆರೋಪದಡಿ ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಈ ಸಂಬಂಧ ಅರ್ನಾಬ್ ಗೋಸ್ವಾಮಿ ಮತ್ತು ಅಮಿತ್ ಮಾಳವೀಯ ಸಲ್ಲಿಸಿದ್ದ ಅರ್ಜಿಯನ್ನು ರಜಾಕಾಲದ ಏಕಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರು ಗುರುವಾರ ವಿಚಾರಣೆ ನಡೆಸಿದರು. ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ಮತ್ತು ಸರ್ಕಾರದ ಪರ ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮುಂದಿನ ವಿಚಾರಣೆವರೆಗೆ ಪ್ರಕರಣಕ್ಕೆ ತಡೆ ನೀಡಿ ಆದೇಶಿಸಿದೆ.

ಅರ್ನಾಬ್‌ ಮತ್ತು ಮಾಳವಿಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು “ಕಾಂಗ್ರೆಸ್‌ ಪಕ್ಷವು ಟರ್ಕಿಯಲ್ಲಿ ಕಚೇರಿ ಹೊಂದಿರುವುದು ನಿರ್ವಿವಾದ. ಈ ಸಂಬಂಧ ಇತರೆ ಸುದ್ದಿ ಮಾಧ್ಯಮಗಳು ಪ್ರಕಟಿಸಿರುವ ಮಾಹಿತಿ ಪರಿಶೀಲಿಸಬಹುದು. ಅರ್ನಾಬ್‌ ಗೋಸ್ವಾಮಿ ಅವರು ತಮ್ಮ ರಿಪಬ್ಲಿಕ್‌ ಟಿವಿಯಲ್ಲಿ ಈ ಸುದ್ದಿ ಪ್ರಸಾರ ಮಾಡಿ, ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಟರ್ಕಿಯು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಅಲ್ಲಿ ಕಾಂಗ್ರೆಸ್‌ ತನ್ನ ಕಚೇರಿ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದೇ ವಿಚಾರವನ್ನು ಡಿಜಿಟಲ್‌ ಮಾಧ್ಯಮದಲ್ಲಿ ಪ್ರಕಟಿಸಲಾಗಿದ್ದು, ತಪ್ಪಾದ ಚಿತ್ರವನ್ನು ಬಳಕೆ ಮಾಡಲಾಗಿತ್ತು. ಆನಂತರ ಅದನ್ನು ಹಿಂಪಡೆದು, ತಿದ್ದುಪಡಿ ಪ್ರಕಟಿಸಲಾಗಿದೆ. ಇದು ಅಚಾತುರ್ಯದಿಂದ ನಡೆದ ಘಟನೆಯಾಗಿದೆ. ಇದರಲ್ಲಿ ಯಾವುದೇ ಅಪರಾಧವಾಗುವಂಥ ಪ್ರಕರಣವಿಲ್ಲ” ಎಂದು ವಾದ ಮಂಡಿಸಿದ್ದಾರೆ.

ಈ ಬಗ್ಗೆ ‘ರಿಪಬ್ಲಿಕ್’ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು, ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ‘ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕುವ ಕಾಂಗ್ರೆಸ್ ಪ್ರಯತ್ನದ ಎದುರು ನನಗೂ ಮತ್ತು ಸತ್ಯಕ್ಕೂ ಮತ್ತೊಮ್ಮೆ ಅದ್ಭುತ ಜಯ ತಂದುಕೊಟ್ಟ ಕಾನೂನು ತಜ್ಞರಾದ ಹಿರಿಯ ವಕೀಲ @ShyamAruna ಅವರಿಗೆ ನಾನು ವೈಯಕ್ತಿಕವಾಗಿ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮೊಂದಿಗಿದ್ದಕ್ಕಾಗಿ ಧನ್ಯವಾದಗಳು ಸರ್ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ : SRH​ ಮಣಿಸಿ ಅಗ್ರಸ್ಥಾನಕ್ಕೇರುವ ತವಕದಲ್ಲಿ RCB ಬಾಯ್ಸ್​​.. ಬಲಿಷ್ಠ ಪ್ಲೇಯಿಂಗ್-11ನಲ್ಲಿ ಇಂದು ಯಾರೆಲ್ಲ ಆಡ್ತಾರೆ?

 

Btv Kannada
Author: Btv Kannada

Read More