ಬೆಂಗಳೂರು : ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್ (KSDL) ಉತ್ಪನ್ನಗಳಿಗೆ ನೂತರ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಆದ್ರೆ, ತಮ್ಮನ್ನಾ ಆಯ್ಕೆಗೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ನಾಟಕದ ಯಾರಾದ್ರು ಸ್ಟಾರ್ ನಟಿಗೆ ಅವಕಾಶ ನೀಡಬಹುದಿತ್ತು ಎಂದು ಹೇಳುತ್ತಿದ್ದಾರೆ. ಇದೀಗ ಈ ಕುರಿತು ಕೈಗಾರಿಕಾ ಸಚಿವ, KSDL ಅಧ್ಯಕ್ಷರಾಗಿರುವ ಎಂ.ಬಿ ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಎಂ.ಬಿ ಪಾಟೀಲ್ ಅವರು ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾರ್ಗದರ್ಶನದಡಿ, ಕೆಎಸ್‌ಡಿಎಲ್‌ನ ಅಧ್ಯಕ್ಷರಾದ ಅಪ್ಪಾಜಿ ಸಿ.ಎಸ್ ನಾಡಗೌಡ ಮತ್ತು ನಾನು, ಕರ್ನಾಟಕದ ಹೆಮ್ಮೆಯಾದ ಮೈಸೂರ್ ಸ್ಯಾಂಡಲ್ ಬ್ರಾಂಡ್ ಅನ್ನು ಭಾರತದ ಅಮೂಲ್ಯ ರತ್ನವಾಗಿಸಲು ಇಚ್ಚಾಶಕ್ತಿಯಿಂದ ಶ್ರಮಿಸುತ್ತಿದ್ದೇವೆ.
ಕೆ.ಎಸ್.ಡಿ.ಎಲ್. ವಹಿವಾಟನ್ನು 2028ರ ವೇಳೆಗೆ ರೂ.5,000 ಕೋಟಿಗೆ ಹೆಚ್ಚಿಸುವುದು ನಮ್ಮ ಹೆಗ್ಗುರಿ. ಈ ನಿಟ್ಟಿನಲ್ಲಿ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗಿರುವ ಬಹು ಆಯಾಮದ ಕಾರ್ಯತಂತ್ರಗಳನ್ನು ಅನುಸರಿಸಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದೆ. ಮೈಸೂರು ಸ್ಯಾಂಡಲ್ ಸೋಪ್ ಅನ್ನು ನಮ್ಮ ರಾಜ್ಯ ಮಾತ್ರವಲ್ಲದೇ ರಾಷ್ಟ್ರೀಯ ಮಟ್ಟಕ್ಕೆ ಮಾರುಕಟ್ಟೆ ವಿಸ್ತರಣೆ ಮಾಡುವ ದೃಷ್ಟಿಯಿಂದ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಆಯ್ಕೆಗೆ 4 ಪ್ರಮುಖ ಕಾರಣಗಳೂ ಇವೆ ಎಂದು ಸ್ಪಷ್ಟಪಡಿಸಿದ್ದಾರೆ.
ನಟಿ ತಮನ್ನಾ ಭಾಟಿಯಾ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ನೇಮಿಸಿರುವುದರ ಹಿಂದೆ ಸಾಕಷ್ಟು ಅಂಶಗಳನ್ನು ಪರಿಗಣಿಸಿ, ಮಾನದಂಡಗಳನ್ನು ಅನುಸರಿಸಲಾಗಿದೆ. ಪ್ಯಾನ್ ಇಂಡಿಯಾ ಖ್ಯಾತಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ, ಯುವ ಸಮೂಹದ ಫಾಲೋವರ್ಸ್ ಒಳಗೊಂಡಂತೆ ನಾನಾ ಕೋನಗಳಲ್ಲಿ ಆಲೋಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಉತ್ಪನ್ನಗಳನ್ನು ವಿಶ್ವದೆಲ್ಲೆಡೆ ವಿಜೃಂಭಿಸುವಂತೆ ಮಾಡುವ ಕಾಯಕದಲ್ಲಿ ಇದು ಒಂದು ಭಾಗವಷ್ಟೆ.
ಈ ಕಾರ್ಯವು ಕೇವಲ ಒಂದು ತಂತ್ರದ ಮೇಲೆ ಅವಲಂಬಿತವಾಗಿಲ್ಲ. ಅದಕ್ಕಾಗಿಯೇ ಕೆ.ಎಸ್.ಡಿ.ಎಲ್. ಸಂಸ್ಥೆಯಲ್ಲಿ ಸಂಪೂರ್ಣ ಹೊಸ ಆಯಾಮಗಳ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅದೇ ರೀತಿ ತಮನ್ನಾರ ಪ್ರಭಾವ ವ್ಯಾಪಕವಾಗಿರುವುದರಿಂದ, ಮೈಸೂರು ಸ್ಯಾಂಡಲ್ ಉತ್ಪನ್ನಗಳು ಕರ್ನಾಟಕದಾಚೆಯ ಮಾರುಕಟ್ಟೆಗೆ ತಲುಪುವುದು ಸುಲಭವಾಗಲಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಇನ್ನು, ಸರ್ಕಾರ ಶ್ರೇಷ್ಠತೆಯನ್ನು ಸಾಧಿಸುವ ಮೂಲಮಂತ್ರದಡಿ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳು, ಕುಶಲ ಮಾನವ ಸಂಪನ್ಮೂಲ, ರಚನಾತ್ಮಕ ಕಾರ್ಯಚಟುವಟಿಕೆಗಳು ಹೀಗೆ ಪ್ರತಿಯೊಂದು ಆಯಾಮದಲ್ಲಿಯೂ ನಾವು ಹೆಜ್ಜೆಯಿಡುತ್ತಿದ್ದೇವೆ. ಮೈಸೂರು ಸ್ಯಾಂಡಲ್ ಕೇವಲ ಒಂದು ಸೋಪ್ ಅಷ್ಟೇ ಅಲ್ಲ, ಇದು ಕರ್ನಾಟಕದ ಪರಂಪರೆಯ ಚಿಹ್ನೆ. ನಮ್ಮ ಸೂಕ್ತ ಕ್ರಮಗಳ ಮೂಲಕ ಈಗ ಇದು ಜಾಗತಿಕ ಮಟ್ಟದಲ್ಲಿ ರಾರಾಜಿಸಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.
ಇದನ್ನೂ ಓದಿ : ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಾಧೀಶ ಟಿ.ಜಿ ಶಿವಶಂಕರೇಗೌಡ ಅಧಿಕಾರ ಸ್ವೀಕಾರ!
