ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಾಧೀಶ ಟಿ.ಜಿ ಶಿವಶಂಕರೇಗೌಡ ಅಧಿಕಾರ ಸ್ವೀಕಾರ!

ಬೆಂಗಳೂರು : ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ದೇಶದಲ್ಲೇ ಮೂರನೇ ಸ್ಥಾನದಲ್ಲಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಾಧೀಶರಾದ ಟಿ.ಜಿ. ಶಿವಶಂಕರೇಗೌಡ ಅವರು ಹೇಳಿದರು.

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಆಯೋಗದಲ್ಲಿ 7 ಸಾವಿರ ಜಿಲ್ಲಾ ಆಯೋಗದಲ್ಲಿ 7 ಸಾವಿರ ಪ್ರಕರಣಗಳು ಬಾಕಿ ಉಳಿದಿದ್ದು, ಇವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಮುಖಾಂತರ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಪ್ರಥಮ ಸ್ಥಾನಕ್ಕೇರಿಸುವ ಗುರಿ ಹೊಂದಲಾಗಿದೆ ಎಂದರು.

ಪ್ರಕರಣಗಳ ವಿಲೇವಾರಿ, ವಿಚಾರಣೆಗೆ ಡಿಜಿಟಲ್ ಸ್ಪರ್ಶ ನೀಡಲಾಗುವುದು. ಕಕ್ಷಿದಾರರು ಹಾಗೂ ಗ್ರಾಹಕರಿಗೆ ಶೀಘ್ರ ಮತ್ತು ಪಾರದರ್ಶಕವಾಗಿ ನ್ಯಾಯ ವಿತರಣೆ ಮಾಡಲಾಗುವುದು. ರಾಜ್ಯ ಆಯೋಗ ಮತ್ತು ಜಿಲ್ಲಾ ಆಯೋಗದ ಆದೇಶಗಳನ್ನು ಆ್ಯಪ್​ಗಳ ಮೂಲಕ ತಲುಪಿಸುವ ಕಾರ್ಯ ಮಾಡಲಾಗುವುದು. ಆಯೋಗದ ಆದೇಶಗಳು ಮತ್ತು ಸಂಪೂರ್ಣ ಮಾಹಿತಿ ಬೆರಳ ತುದಿಯಲ್ಲಿ ಸಿಗುವಂತೆ ಮಾಡಲಾಗುವುದು. ಖಾಲಿಯಿರುವ ಹುದ್ದೆಗಳ ಭರ್ತಿಗೂ ಕ್ರಮವಹಿಸಲಾಗುವುದು. ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ತನ್ನದೇ ಆದ ಇತಿಹಾಸವಿದೆ. ಮಾತಿಗಿಂತ ಕೃತಿ ಮುಖ್ಯ ಎಂದು ಟಿ.ಜಿ. ಶಿವಶಂಕರೇಗೌಡ ಹೇಳಿದರು.

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷರಾದ ರವಿಶಂಕರ್ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆಯೋಗದ ರಿಜಿಸ್ಟರ್ ಮಲ್ಲಿಕಾರ್ಜುನ ಎಮ್.ಕಮಟಗಿ, ಆಯೋಗದ ಸದಸ್ಯರಾದ ಸುನೀತಾ ಬಾಗೇವಾಡಿ ಸೇರಿದಂತೆ ಆಯೋಗದ ಸದಸ್ಯರು ಉಪಸ್ಥಿತರಿದ್ದರು.

ಸಚಿವ ಚಲುವರಾಯಸ್ವಾಮಿ, ಶಾಸಕ ದಿನೇಶ್ ಗೂಳಿಗೌಡ ಅಭಿನಂದನೆ : ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಿವೃತ್ತ ನ್ಯಾಯಾಧೀಶರಾದ ಟಿ.ಜಿ.ಶಿವಶಂಕರೇಗೌಡ ಅವರನ್ನು ಕೃಷಿ ಸಚಿವರಾದ ಚಲುವರಾಯಸ್ವಾಮಿ, ಶಾಸಕರಾದ ದಿನೇಶ್ ಗೂಳಿಗೌಡ ಅವರು ಅಭಿನಂದಿಸಿ ಶುಭಕೋರಿದರು.

ಇದನ್ನೂ ಓದಿ : ರಾಮನಗರ ಇನ್ಮುಂದೆ ‘ಬೆಂಗಳೂರು ದಕ್ಷಿಣ ಜಿಲ್ಲೆ’ – ಮರು ನಾಮಕರಣಕ್ಕೆ ಒಪ್ಪಿಗೆ ಸೂಚಿಸಿದ ಸಂಪುಟ!

Btv Kannada
Author: Btv Kannada

Read More