ಬೆಂಗಳೂರು : ಕನ್ನಡಿಗರ ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ ಗಾಯಕ ಸೋನು ನಿಗಮ್ಗೆ ಈಗಾಗಲೇ ಕನ್ನಡಪರ ಸಂಘಟನೆಗಳು, ಕನ್ನಡಿಗರು ಛೀಮಾರಿ ಹಾಕಿದ್ದಾರೆ. ಚಿತ್ರರಂಗ ಸಹ ಸೋನು ನಿಗಂಗೆ ಅಸಹಕಾರ ತೋರುವುದಾಗಿ ಹೇಳಿದೆ.
ಸೋನು ನಿಗಂ, ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ ಘಟನೆಗೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರರು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್ಐಆರ್ ಸಹ ದಾಖಲಾಗಿದ್ದು, ಪೊಲೀಸರು ಸೋನು ನಿಗಮ್ಗೆ ಇ-ಮೇಲ್ ಮೂಲಕ ನೊಟೀಸ್ ಕಳಿಸಿದ್ದರು. ನೊಟೀಸ್ಗೆ ಉತ್ತರ ನೀಡದಿದ್ದ ಸೋನು ನಿಗಮ್, ಹೈಕೋರ್ಟ್ ಮೊರೆ ಹೋಗಿ ತಮ್ಮ ಮೇಲೆ ದಾಖಲಾಗಿರುವ ಎಫ್ಐಆರ್ ರದ್ದು ಮಾಡುವಂತೆ ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು, ಸೋನು ನಿಗಮ್ ಇದ್ದಲ್ಲಿಗೇ ಹೋಗಿ ವಿಚಾರಣೆ ನಡೆಸಬೇಕು ಅಥವಾ ವಿಡಿಯೋ ಕಾಲ್ ಮೂಲಕ ವಿಚಾರಣೆ ಮಾಡಬೇಕು ಎಂದಿತ್ತು. ಅಲ್ಲದೆ ಬಲವಂತದ ಕ್ರಮವನ್ನು ಸೋನು ನಿಗಮ್ ವಿರುದ್ಧ ಕೈಗೊಳ್ಳುವಂತಿಲ್ಲ ಎಂದಿತ್ತು. ಅದರಂತೆ ಆವಲಹಳ್ಳಿ ಪೊಲೀಸರು ವಿಡಿಯೋ ಕಾಲ್ ಬದಲಿಗೆ ನೇರವಾಗಿ ಮುಂಬೈಗೆ ಹೋಗಿ ಸೋನು ನಿಗಮ್ನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ.
ಆದ್ರೆ, ಅವಲಹಳ್ಳಿ ಪೊಲೀಸರಿಗೆ ಗಾಯಕ ಸೋನು ನಿಗಮ್ ಡೇಟ್ ಸಿಕ್ತಿಲ್ಲ. ಸದ್ಯ ಅವಲಹಳ್ಳಿ ಪೊಲೀಸರು ಸೋನು ನಿಗಮ್ ಸಂಪರ್ಕ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಸಮಯಕ್ಕಾಗಿ ಪೊಲೀಸರು ಕಾಯ್ತಿದ್ದು, ಆರೋಪಿ ಸ್ಥಾನದಲ್ಲಿರುವ ಗಾಯಕ ಸೋನು ನಿಗಮ್ ಬ್ಯುಸಿ ಶೆಡ್ಯೂಲ್ನಲ್ಲಿ ಇದ್ದಾರಂತೆ. ಸದ್ಯ ವಕೀಲರಿಂದ ಮಾಹಿತಿ ಪಡೆದು ಸೋನು ನಿಗಮ್ ಸಮಯ ನೀಡೋದಾಗಿ ಹೇಳಿದ್ದಾರೆ. ಆ ಬಳಿಕವೂ ಡೇಟ್ ಸಿಗದೇ ಹೋದರೆ ಪೊಲೀಸರು ಮತ್ತೆ ಕೋರ್ಟ್ ಮೊರೆ ಹೋಗಲು ಸಿದ್ದತೆ ನಡೆಸಿದ್ದಾರೆ. ಈ ವಾರ ಕಾಯ್ದು ನಂತರ ಕೋರ್ಟ್ ಮೆಟ್ಟಿಲೇರಲು ಖಾಕಿ ನಿರ್ಧರಿಸಿದೆ.
ಇದನ್ನೂ ಓದಿ : ಊಹೆ ಮಾಡಿಕೊಂಡು ವರದಿ ಮಾಡಬೇಡಿ – ಮಾಧ್ಯಮಗಳಿಗೆ ಹೋಂ ಮಿನಿಸ್ಟರ್ ವಾರ್ನಿಂಗ್!
