ಮುಂಬೈ : ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ 2025ರ 63ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪ್ಲೇ-ಆಫ್ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಪ್ರಮುಖವಾಗಿತ್ತು.
ಆದ್ರೆ ಮುಂಬೈನ ಅದ್ಭುತ ಪ್ರದರ್ಶನದ ಮುಂದೆ ಮಂಡಿಯೂರಿದ ಡೆಲ್ಲಿ, 60 ರನ್ಗಳಿಂದ ಸೋತು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಇತ್ತ ಮುಂಬೈ ಅಗ್ರ ನಾಲ್ಕು ತಂಡಗಳಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಮೂಲಕ ದಾಖಲೆಯ 11ನೇ ಬಾರಿಗೆ ಮುಂಬೈ ಪ್ಲೇ ಆಫ್ ಪ್ರವೇಶಿಸಿದಂತಾಗಿದೆ.
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್, ಆರಂಭಿಕ ಆಘಾತಕ್ಕೋಳಗಾಯಿತು. ಆ ಬಳಿಕ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಅರ್ಧಶತಕ(73)ಜೊತೆಗೆ ನಮನ್ ಧೀರ್ ಸ್ಫೋಟಕ್ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 180 ರನ್ ಕಲೆ ಹಾಕಿತು. ಸೂರ್ಯಕುಮಾರ್ 43 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ಗಳ ಸಹಿತ ಅಜೇಯ 73ರನ್ಗಳಿಸಿದರೆ, ನಮನ್ ಧೀರ್ 8 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ಗಳ ಸಹಿತ 24 ರನ್ಗಳಿಸಿದರು.
ಗೆಲುವಿಗೆ 181ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, 18.2 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 121 ರನ್ ಗಳಿಸುವ ಮೂಲಕ ಸೋಲು ಒಪ್ಪಿಕೊಂಡಿತು. ಇದರೊಂದಿಗೆ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಪ್ಲೇಆಫ್‌ಗೆ 4 ತಂಡಗಳು ಎಂಟ್ರಿ : ಡೆಲ್ಲಿ ವಿರುದ್ಧ ಮುಂಬೈ ಗೆಲುವು ಸಾಧಿಸಿರುವ ಪರಿಣಾಮವಾಗಿ ಲೀಗ್ ಹಂತದಲ್ಲಿ ಇನ್ನು ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇಆಫ್‌ಗೆ ಎಂಟ್ರಿಕೊಟ್ಟ 4 ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಆ ಪ್ರಕಾರ, ಗುಜರಾತ್ ಟೈಟನ್ಸ್, ಆರ್ಸಿಬಿ, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ತಂಡಗಳು ನಾಕೌಟ್ ಸುತ್ತಿಗೆ ಅರ್ಹತೆ ಪಡೆದಿವೆ. ಇದೀಗ ಈ 4 ತಂಡಗಳ ನಡುವೆ ಟಾಪ್ 2 ಸ್ಥಾನಕ್ಕೆ ಪೈಪೋಟಿ ನಡೆಯಲಿದೆ.
ಇದನ್ನೂ ಓದಿ : ‘ಅಡ್ವಾನ್ಸ್ ಟಿಪ್ಸ್’ ಪದ್ಧತಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಡಿವಾಣ – ಉಬರ್‌ಗೆ CCPA ನೋಟಿಸ್!
