ನವದೆಹಲಿ : ತ್ವರಿತ ಸೇವೆ ಪಡೆಯಲು ಇಚ್ಛಿಸುವ ಗ್ರಾಹಕರು ಕ್ಯಾಬ್ ಬುಕಿಂಗ್‌ಗೂ ಮೊದಲೇ ಹಣ ಪಾವತಿ ಮಾಡುವಂತೆ ಸೂಚಿಸುವ ಹೊಸ ಪ್ಯೂಚರ್ (ಅಡ್ವಾನ್ಸ್ ಟಿಪ್) ಅನ್ನು ಉಬರ್ ಕಂಪನಿಯು ತನ್ನ ಆ್ಯಪ್‌ನಲ್ಲಿ ಅಭಿವೃದ್ಧಿಪಡಿಸಿದೆ. ಇದು ನ್ಯಾಯಸಮ್ಮತವಲ್ಲದ ಕ್ರಮ ಎಂದಿರುವ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಉಬರ್‌ಗೆ ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು, ತ್ವರಿತ ಸೇವೆ ಒದಗಿಸಲು ಗ್ರಾಹಕರಿಂದ ಮುಂಗಡವಾಗಿ ಟಿಪ್ಸ್ ಪಡೆಯುತ್ತಿರುವ ಕ್ಯಾಬ್ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಟ್ಯಾಕ್ಸಿ ಸೇವೆಗೆ ಗ್ರಾಹಕರಿಂದ ಬುಕ್ ಮಾಡುವಾಗಲೇ ಟಿಪ್ಸ್ ರೂಪದಲ್ಲಿ ಹೆಚ್ಚುವರಿ ಹಣ (ಅಡ್ವಾನ್ಸ್ ಟಿಪ್) ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಈ ಸಂಬಂಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA)ಕ್ಕೆ ಸೂಚನೆ ನೀಡಿದ್ದೆ. ಈ ಪ್ರಾಧಿಕಾರವು ಪ್ರಮುಖ ಕ್ಯಾಬ್ ಸರ್ವೀಸ್ Uberಗೆ ನೋಟಿಸ್ ಜಾರಿ ಮಾಡಿದೆ ಎಂದು ಜೋಶಿ ತಿಳಿಸಿದ್ದಾರೆ.
ಟ್ಯಾಕ್ಸಿ ಸೇವೆ ಒದಗಿಸಲು Uber ನಂತಹ ಸೇವಾ ಸಂಸ್ಥೆಗಳು ಗ್ರಾಹಕರಿಂದ ಮುಂಚಿತವಾಗಿಯೇ ಒತ್ತಾಯದಿಂದ ಟಿಪ್ಸ್ ಪಡೆಯುತ್ತಿರುವುದು ಕಳವಳಕಾರಿ ಬೆಳವಣಿಗೆ. ಟಿಪ್ಸ್ ಎನ್ನುವುದು ಗ್ರಾಹಕರು ಉತ್ತಮ ಸೇವೆಗೆ ಮೆಚ್ಚಿ ಕೊಡುವಂಥದ್ದು. ಇದನ್ನು ಯಾರೂ ಒತ್ತಾಯದಿಂದ ಪಡೆಯಬಾರದು ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಎಕ್ಸ್ ಪೋಸ್ಟ್ನಲ್ಲಿ ಸೂಚಿಸಿದ್ದಾರೆ.
ಕ್ಯಾಬ್‌ನವರು ಗ್ರಾಹಕರಿಗೆ ಸೇವೆ ಕಲ್ಪಿಸುವ ಮೊದಲೇ ಟಿಪ್ಸ್ ಪಡೆಯುವುದು ದಬ್ಬಾಳಿಕೆಯಾಗುತ್ತದೆ. ಗ್ರಾಹಕರ ಶೋಷಣೆಯಾಗುತ್ತದೆ. ಹಾಗಾಗಿ ಈ ಮುಂಗಡ ಟಿಪ್ಸ್ ಬಗ್ಗೆ CCPAಗೆ ಸೂಚನೆ ನೀಡಿದ್ದೆ. CCPA ತಪಾಸಣೆ ವೇಳೆ Uber ಸೇವೆಗೆ ಮುಂಗಡ ಟಿಪ್ಸ್ ಪಡೆಯುತ್ತಿರುವುದು ಸಾಬೀತಾದ್ದರಿಂದ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ದೇವಾ ಚಕ್ರವರ್ತಿ ನಿರ್ದೇಶನದ “ಜಾವಾ” ಅದ್ಧೂರಿ ಚಿತ್ರೀಕರಣಕ್ಕೆ ರೆಡಿ – ಇನ್ಮುಂದೆ ಜಾವಾ ತ್ರಿಬಲ್ ರೈಡಿಂಗ್ ಶುರು!
