ಕರ್ನಾಟಕದ ನೂತನ DG-IGPಯಾಗಿ ಇಂದು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ನೇಮಕ?

ಬೆಂಗಳೂರು : ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿರುವ ಅಲೋಕ್ ಮೋಹನ್ ಅವರ ಸೇವಾವಧಿ ಇಂದು (ಮೇ 21) ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾಗಲಿರುವ ಹುದ್ದೆಗೆ ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.

ಕೆಲ ದಿನಗಳ ಮಟ್ಟಿಗೆ ಪ್ರಭಾರಿ ಡಿಜಿ-ಐಜಿಪಿಯಾಗಿ ಸಲೀಂ ಅವರನ್ನು ನೇಮಿಸಿ ತದನಂತರ ಕೇಂದ್ರ ಲೋಕಸೇವಾ ಆಯೋಗದ ಸಮ್ಮತಿ ಬಳಿಕ ಅವರನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಡಾ.ಎಂ.ಎ.ಸಲೀಂ
ಡಾ.ಎಂ.ಎ.ಸಲೀಂ

ಸೇವಾ ಹಿರಿತನ ಆಧಾರದ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್‌ಠಾಕೂರ್, ಸಿಐಡಿ ಡಿಜಿಪಿ ಸಲೀಂ, ಸೈಬರ್‌ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಸೇರಿ ಏಳು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿದ್ದಾರೆ. ಆದರೆ ಹಿರಿತನದ ಮಾನದಂಡದಲ್ಲಿ ಡಿಜಿ-ಐಪಿಪಿ ಹುದ್ದೆಗೆ ಸಲೀಂ ಹಾಗೂ ಪ್ರಶಾಂತ್ ಮುಂಚೂಣಿಯಲ್ಲಿದ್ದಾರೆ.

ಈಗಾಗಲೇ ನೂತನ ಡಿಜಿ-ಐಜಿಪಿ ಆಯ್ಕೆ ಸಂಬಂಧ 7 ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಸರ್ಕಾರ ಶಿಫಾರಸು ಮಾಡಿದೆ. ಆದರೆ ಯುಪಿ ಎಸ್‌ನಿಂದ ಕ್ಲಿಯರೆನ್ಸ್‌ ಸಿಗದ ಕಾರಣ ಮೊದಲು 3 ತಿಂಗಳು ಪ್ರಭಾರ ಡಿಜಿ-ಐಜಿಪಿ ನೇಮಕವಾಗಲಿದೆ. ಯುಪಿಎಸ್‌ಸಿ ಸಮ್ಮತಿ ಬಳಿಕ ಕಾಯಂ ಡಿಜಿ-ಐಜಿಪಿ ಆಗಲಿದ್ದಾರೆ ಎಂದು ಮೂಲಗಳು ಹೇಳಿವೆ.

ಏ.30 ರಂದು ಅಲೋಕ್ ಮೋಹನ್ ನಿವೃತ್ತಿಯಾಗ ಬೇಕಿತ್ತು. ಆದರೆ ಮೇ 21ರವರೆಗೆ ಡಿಜಿ-ಐಜಿಪಿ ಅವರ ಸೇವಾವಧಿ ವಿಸ್ತರಿಸಿದ್ದ ಸರ್ಕಾರ, ಮುಂದಿನ ಡಿಜಿ-ಐಜಿಪಿ ಹುದ್ದೆಗೆ ಸಂಭವನೀಯ ಅಧಿಕಾರಿಗಳ ಪಟ್ಟಿ ಯುಪಿಎಸ್ ಸಿಗೆ ಕಳುಹಿಸಿತ್ತು. ಹೀಗಾಗಿ 2 ವರ್ಷ ಆಡಳಿತ ನಡೆಸಿದ ಅಲೋಕ್ ಮೋಹನ್ ಅವರ ಸೇವಾವಧಿ (ಮೇ 21) ಇಂದು ಮುಕ್ತಾಯವಾಗಲಿದ್ದು, ಸಂಜೆ ಆರಕ್ಷಕ ಪಡೆಯ ಹೊಸ ದಂಡನಾಯಕ ಆಯ್ಕೆ ನಡೆಯಬೇಕಿದೆ. ಇನ್ನು ಇಂದು ಡಿಜಿ-ಐಜಿಪಿ ಅವರ ನಿರ್ಗಮನ ಸೂಚನೆಯಾಗಿ ಪ್ರಶಂಸನಾ ಸೇವಾ ಪರೇಡ್ ಸಹ ಆಯೋಜನೆಯಾಗಿದೆ.

ಇದನ್ನೂ ಓದಿ : ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಭಾಷಣ – ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ!

Btv Kannada
Author: Btv Kannada

Read More