ಬೆಂಗಳೂರು : ಸಿಲಿಕಾನ್ ಸಿಟಿ ಈಗ ‘ರೈನ್’ ಸಿಟಿಯಾಗಿ ಬದಲಾವಣೆ ಆಗಿದೆ ಅನ್ನುವಂತೆ ಮಳೆ ಸುರುಯುತ್ತಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ, ಇಂದು ಕೂಡ ಮುಂದುವರೆದಿದೆ. ಈಗಾಗಲೇ ಬೆಂಗಳೂರಿನ ಹಲವೆಡೆ ಜಿಟಿ ಜಿಟಿ ವರ್ಷಧಾರೆ ಆರಂಭವಾಗಿದ್ದು, ವರುಣಾರ್ಭಟಕ್ಕೆ ನಗರವಾಸಿಗಳು ಬೇಸತ್ತು ಹೋಗಿದ್ದಾರೆ.
ಒಂದೆಡೆ ಪೂರ್ವ ಮುಂಗಾರು ಮಳೆಯ ಆರ್ಭಟಕ್ಕೆ ಇಡೀ ಬೆಂಗಳೂರು ಕೂಲ್ ಕೂಲ್ ಆಗಿದ್ದರೆ, ಮತ್ತೊಂದೆಡೆ ನಗರದಲ್ಲಿ ಸಾಲು ಸಾಲು ಸಮಸ್ಯೆಗಳ ಸರಮಾಲೆಗಳು ಕೂಡ ತೆರೆದುಕೊಂಡಿವೆ. ಬೆಳಗ್ಗೆಯೇ ಎದ್ದು ಕೆಲಸಕ್ಕೆ ಹೋಗುವ ಜನರಿಗೆ ಭಾರೀ ಸಮಸ್ಯೆ ಆಗಿದೆ. ನಿರಂತರ ಮಳೆಯಿಂದ ತಗ್ಗು ಪ್ರದೇಶಗಳಲ್ಲಿರುವ ಜನರು ಹಾಗೂ ಕೆಲ ಅಪಾರ್ಟ್ಮೆಂಟ್ಗಳ ವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಹೀಗಿರುವಾಲೇ ಮುಂದಿನ 3, 4 ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯ ಕೆಲ ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯಾದ್ಯಂತ ಇಂದಿನಿಂದ ಮೇ 24ರವರೆಗೆ ವ್ಯಾಪಕ ಮಳೆಯಾಗಲಿದ್ದು, ಮೇ 22ರಂದು ಅರಬ್ಬಿ ಸಮುದ್ರದಲ್ಲಿ ವಾಯುಭಾರತ ಕುಸಿತ ಸಾಧ್ಯತೆಯಿದೆ. ಪರಿಣಾಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವರುಣ ಅಬ್ಬರಿಸಲಿದ್ದಾನೆ. ಟ್ರಫ್ ಇರುವ ಕಾರಣ ಬೆಂಗಳೂರು ಸೇರಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಚಿಕ್ಕಮಗಳೂರು, ಹಾಸನ ಕೊಡಗು, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಹಾಗೆಯೇ ಮುಂದಿನ 3,4 ಗಂಟೆ ಬೆಂಗಳೂರಲ್ಲಿ ಭಾರೀ ಮಳೆ ಮುನ್ಸೂಚನೆಯಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಕೋಲಾರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಾಳಿ ಸಹಿತ ಧಾರಾಕರ ಮಳೆಯಾಗುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ – ಹೊಸಪೇಟೆಯಲ್ಲಿ ಇಂದು ಸಾಧನಾ ಸಮಾವೇಶ!
