ಬೆಂಗಳೂರು : ಬೆಂಗಳೂರು ಮಹಾನಗರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಜಯನಗರ, ಚಾಮರಾಜಪೇಟೆ, ಬನಶಂಕರಿ, ಶಾಂತಿನಗರ, ವಿಜಯನಗರ, ಚಂದ್ರಾಲೇಔಟ್, ರಾಜಾಜಿನಗರ, ಆರ್.ಟಿ.ನಗರ, ಹೆಬ್ಬಾಳ, ಮಲ್ಲೇಶ್ವರಂ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬಿಟಿಎಂ ಲೇಔಟ್ ಸೇರಿ ಹಲವೆಡೆ ರಾತ್ರಿಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ಪೈಕಿ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆಯೂ ಮಳೆ ಜೋರಾಗಿದೆ. ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾತ್ರಿಯಿಂದಲೂ ಸುರಿಯುತ್ತಿರುವ ಮಳೆಗೆ ಬೆಂಗಳೂರಿನ ಹಲವಡೆ ಮರಗಳು ಧರೆಗುರುಳಿವೆ. ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ನಲ್ಲಿ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇಂದು ಕೂಡಾ ಸಿಲಿಕಾನ್ ಸಿಟಿಯಲ್ಲಿ ಯೆಲ್ಲೋ ಅಲರ್ಟ್ ಇದ್ದು, ಜೋರು ಮಳೆ ಆರ್ಭಟ ಮಾಡುವ ಸಾಧ್ಯತೆ ಇದೆ.
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ನಿಧಾನಗತಿಯ ಸಂಚಾರ ಇದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಪುಟ್ಟೇನಹಳ್ಳಿ ಮುಖ್ಯರಸ್ತೆ ಕಡೆಯಿಂದ ಕೊತ್ತನೂರು ದಿನ್ನೆ ಜಂಕ್ಷನ್ ಕಡೆಗೆ ಹಾಗೂ ಹೊಸಗುಡ್ಡದಹಳ್ಳಿ ಜಂಕ್ಷನ್ ಕಡೆಯಿಂದ ಮೈಸೂರು ರಸ್ತೆ ಟೋಲ್ಗೇಟ್ ಕಡೆಗೆ. ಮಳೆನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಯಾವೆಲ್ಲ ರಸ್ತೆಗಳು ಜಲಾವೃತ?
- ಜಯದೇವ ಆಸ್ಪತ್ರೆ ಕಡೆಯಿಂದ ಈಸ್ಟ್ ಎಂಡ್ ಸರ್ಕಲ್ ಕಡೆಗೆ.
- ವರ್ತೂರು ಕಾಲೇಜು ಕಡೆಯಿಂದ ವರ್ತೂರು ಕೋಡಿ ಕಡೆಗೆ.
- ಕಾಟನ್‌ಪೇಟ್ ಕಡೆಯಿಂದ ಸುಲ್ತಾನ್‌ಪೇಟೆ ವೃತ್ತದ ಕಡೆಗೆ.
- ಬಿಳೇಕಹಳ್ಳಿ ಕಡೆಯಿಂದ ಜಿ ಡಿ ಮರ ಕಡೆಗೆ.
- ಸಾರಕ್ಕಿ ಜಂಕ್ಷನ್ ಕಡೆಯಿಂದ ಸಿಂಧೂರ ಜಂಕ್ಷನ್ ಕಡೆಗೆ.
ನಿರಂತರ ಮಳೆಯಿಂದ ತಗ್ಗು ಪ್ರದೇಶಗಳಲ್ಲಿರುವ ಜನರು ಹಾಗೂ ಕೆಲ ಅಪಾರ್ಟ್ಮೆಂಟ್ಗಳ ವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಬೆಳ್ಳಂಬೆಳಗ್ಗೆ ವರುಣ ಜಿನುಗುಟ್ಟುತ್ತಿದ್ದು ಆರ್.ಆರ್ ನಗರದ ಬಿಇಎಂಎಲ್ 3ನೇ ಹಂತದ ಬಾಲಕೃಷ್ಣ ರಂಗ ಮಂದಿರ ಜನರಿಗೆ ಸಮಸ್ಯೆಗಳು ಎದುರಾಗಿವೆ. ನಿರಂತರ ಮಳೆಯಿಂದ ಮನೆ ಮುಂದಿರುವ ರಸ್ತೆಗಳಲ್ಲಿ ನೀರು ನಿಂತು ತೊಂದರೆಯಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮಹಾಮಳೆಗೆ ಮತ್ತಿಬ್ಬರು ಬಲಿ – ಬೇಸ್ಮೆಂಟ್ನಲ್ಲಿ ತುಂಬಿದ್ದ ನೀರು ಖಾಲಿ ಮಾಡುವ ವೇಳೆ ದುರಂತ!
