300 ವರ್ಷಗಳ ಬಳಿಕ ತಿಮ್ಮಪ್ಪನಿಗೆ ಮೈಸೂರು ರಾಜವಂಶಸ್ಥರ ಉಡುಗೊರೆ – 100 ಕೆಜಿ ಬೆಳ್ಳಿ ದೀಪ ನೀಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್!

ತಿರುಪತಿ : ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಮೈಸೂರು ಯದುವಂಶದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು 100 ಕೆ.ಜಿ. ತೂಕದ ಎರಡು ಬೆಳ್ಳಿ ನಂದಾದೀಪಗಳನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಈ ಕಾಣಿಕೆಯು ಮೈಸೂರು ರಾಜವಂಶ ಮತ್ತು ತಿರುಪತಿ ದೇವಸ್ಥಾನದ ನಡುವಿನ 300 ವರ್ಷಗಳ ಐತಿಹಾಸಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಿದೆ. ಈ ಸಂದರ್ಭದಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೂ ಉಪಸ್ಥಿತರಿದ್ದರು.

ಮೈಸೂರು ರಾಜವಂಶವು ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಸಮರ್ಪಿಸುವ ಸಂಪ್ರದಾಯವನ್ನು ಶತಮಾನಗಳಿಂದ ಮುಂದುವರಿಸಿಕೊಂಡು ಬಂದಿದೆ. ಸುಮಾರು 300 ವರ್ಷಗಳ ಹಿಂದೆ, ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಿರುಮಲ ದೇವಸ್ಥಾನಕ್ಕೆ ಬೆಳ್ಳಿ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದರು. ಶತಮಾನಗಳ ಹಿಂದೆ ನೀಡಿದ್ದ ನಂದಾದೀಪವೇ ಈಗಲೂ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿದೆ. ಹಳೆಯ ನಂದಾದೀಪ ಈಗ ದುರಸ್ಥಿಗೊಂಡಿದ್ದು, ಈ ಬಗ್ಗೆ ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್‌ಗೆ TTD ಮಾಹಿತಿ ನೀಡಿತ್ತು.

ಹಾಗಾಗಿ ಹಳೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಇದೀಗ ಬೃಹತ್ ಕಾಣಿಕೆಯನ್ನು ಸಮರ್ಪಿಸಿದ್ದಾರೆ. ಈ ಎರಡು ಬೆಳ್ಳಿ ದೀಪಗಳು ತಲಾ 50 ಕೆ.ಜಿ. ತೂಕವನ್ನು ಹೊಂದಿದ್ದು, ಒಟ್ಟು 100 ಕೆ.ಜಿ. ಬೆಳ್ಳಿಯಿಂದ ತಯಾರಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಡಾ. ಅಲೋಕ್‌ ಮೋಹನ್‌ ನಾಳೆ ನಿವೃತ್ತಿ – ಯಾರಾಗ್ತಾರೆ ಕರ್ನಾಟಕದ ನೂತನ ಡಿಜಿ-ಐಜಿಪಿ? ಇಂದೇ ನೇಮಕ ಸಾಧ್ಯತೆ! 

Btv Kannada
Author: Btv Kannada

Read More