ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇ 20ರಂದು ಎರಡು ವರ್ಷಗಳನ್ನು ಪೂರೈಸುತ್ತಿದ್ದು, ಕಲ್ಯಾಣ ಕರ್ನಾಟಕದ ಹೊಸಪೇಟೆಯಲ್ಲಿ ಬೃಹತ್ ‘ಸಾಧನಾ ಸಮಾವೇಶ’ ನಡೆಸಲು ಭರ್ಜರಿ ತಯಾರಿ ನಡೆಸಿದೆ. ಸರ್ಕಾರದ ನಾನಾ ಯೋಜನೆ ಫಲಾನುಭವಿಗಳು ಒಳಗೊಂಡು ಸುತ್ತಮುತ್ತಲ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಹೊಸಪೇಟೆಯ ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶದ ಮೂಲಕ ‘ಕೈ’ ಸರ್ಕಾರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಈ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿ ರಾಜ್ಯ ಬಿಜೆಪಿ ಟೀಕಿಸಿದ್ದು, ‘ದುಬಾರಿ ಜೀವನ ಅಭಿವೃದ್ದಿ ಶೂನ್ಯ’ ಇದುವೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ 2 ವರ್ಷದ ಸಾಧನೆ ಕೇವಲ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಹಗರಣಗಳು ಇವಿಷ್ಟೇ. ಮಹಿಳಾ ವಿರೋಧಿ, ದಲಿತ ವಿರೋಧಿ, ನಾಡ ವಿರೋಧಿ, ಹಿಂದೂ ವಿರೋಧಿ, ರೈತ ವಿರೋಧಿ ನಿಲುವುಗಳೇ ಕಾಂಗ್ರೆಸ್ ಕನ್ನಡಿಗರಿಗೆ ನೀಡಿದ ಅಸಲಿ ಗ್ಯಾರಂಟಿಗಳು.
ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ ಎಂದು ಜನರೇ ಹೇಳುವಂತಾಗಿದೆ. ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರೇ ಅನುದಾನಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಆಡಳಿತ ವಿರೋಧಿ ಅಲೆ ಈಗ ಎಷ್ಟಿದೆ ಅಂದರೆ ಸ್ವತಃ ಸಿದ್ದರಾಮಯ್ಯ ಅವರು ವರುಣಾದಲ್ಲಿ ಚುನಾವಣೆಗೆ ನಿಂತರೆ ಠೇವಣಿ ಕಳೆದುಕೊಳ್ಳುವುದು ನಿಶ್ಚಿತ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ : ರಸ್ತೆ ಅಪಘಾತದಲ್ಲಿ ಬಿಜೆಪಿ ಮುಖಂಡರ ನಿಧನ – ಸಂತಾಪ ಸೂಚಿಸಿದ ರೈಲ್ವೆ ಮಂತ್ರಿ ವಿ. ಸೋಮಣ್ಣ!
