ಜ್ಞಾನಭಾರತಿ ಆವರಣ ‘ಪಾರಂಪರಿಕ ತಾಣ’ ಎಂದು ಘೋಷಿಸಲು ಪರಿಸರ ಪ್ರೇಮಿಗಳಿಂದ ಮನವಿ – ಅರಣ್ಯ ಸಚಿವರಿಂದ ಗ್ರೀನ್ ಸಿಗ್ನಲ್​!

ಬೆಂಗಳೂರು : ಜ್ಞಾನಭಾರತಿ ಆವರಣದಲ್ಲಿರುವ ಜೀವವೈವಿಧ್ಯ ಕಾಡಿನಲ್ಲಿ ಸಾವಿರಾರು ಮರಗಳನ್ನು ಕಡಿಯುವ ಯಾವುದೇ ರೀತಿಯ ಅಭಿವೃದ್ಧಿಗೆ ಅನುವು ಮಾಡಿಕೊಡದೆ, ‘ಜೈವಿಕ ವೈವಿಧ್ಯ ವನ’ ಅಥವಾ ‘ಪಾರಂಪರಿಕ ತಾಣ’ ಎಂದು ಘೋಷಿಸಲು ಇತ್ತೀಚೆಗೆ ಪರಿಸರ ಪ್ರೇಮಿಗಳು ಅರಣ್ಯ ಸಚಿವ ಈಶ್ವರ್​​ ಖಂಡ್ರೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಇದೀಗ ಅರಣ್ಯ ಸಚಿವ ಈಶ್ವರ್​​ ಖಂಡ್ರೆ ಅವರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣದ ಬಯೋಪಾರ್ಕನ್ನು ಪಾರಂಪರಿಕ ತಾಣ (HERITAGE SITE) ಎಂದು ಘೋಷಿಸಲು ಕಡತ ಮಂಡಿಸಲು ಸೂಚಿಸಿದ್ದಾರೆ.

ಸಚಿವ ಈಶ್ವರ್​​ ಖಂಡ್ರೆ ಸೂಚನೆಯಲ್ಲೇನಿದೆ? ಬೆಂಗಳೂರು ವಿಶ್ವವಿದ್ಯಾನಿಲಯ-ಜ್ಞಾನಭಾರತಿ ಆವರಣದಲ್ಲಿ ಲಕ್ಷಾಂತರ ಬೃಹತ್ ಮರಗಳಿದ್ದು, ಇಲ್ಲಿನ ಜೀವವೈವಿಧ್ಯತೆಯನ್ನು ಮುಂದಿನ ಪೀಳಿಗೆಗೆ ಕಾಪಾಡುವ ಮತ್ತು ಬೆಂಗಳೂರು ಮಹಾನಗರದ ಹಸಿರು ವಲಯವನ್ನು ರಕ್ಷಿಸುವ ಹೊಣೆ ಇಲಾಖೆಯ ಮೇಲಿದೆ. ಆದರೆ ಜ್ಞಾನಭಾರತಿ ಪ್ರದೇಶದಲ್ಲಿ ಮರಗಳನ್ನು ಕಡಿದು ವಿವಿಧ ನಿರ್ಮಾಣ ಕಾರ್ಯ ಕೈಗೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದು, ಇದನ್ನು ನಿಗ್ರಹಿಸಿ ಜೀವವೈವಿಧ್ಯ ರಕ್ಷಿಸುವಂತೆ ಪರಿಸರ ಪ್ರೇಮಿಗಳು ಮನವಿ ಮಾಡಿರುತ್ತಾರೆ. ಜೀವ ವೈವಿಧ್ಯ ಕಾಯಿದೆ 2002ರ ಅಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಈ ಹಸಿರು ಆವರಣವನ್ನು ಪಾರಂಪರಿಕ ತಾಣ ಎಂದು ಘೋಷಿಸಲು ಸಾಧ್ಯವಿದ್ದಲ್ಲಿ, ಪ್ರಸ್ತಾವನೆಯನ್ನು ಕಡತದಲ್ಲಿ ಸಲ್ಲಿಸಲು ಈ ಮೂಲಕ ಸೂಚಿಸಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ್​​ ಖಂಡ್ರೆ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ‘ಬೇರು ಭೂಮಿ’ ಪೇಸ್​ಬುಕ್​ ಖಾತೆ, ಅರಣ್ಯ ಮಂತ್ರಿಗಳಾದ ಗೌರನ್ವಿತ ಶ್ರೀ ಈಶ್ವರ್ ಖಂಡ್ರೆಯವರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಅವರಣದ ಬಯೋಪಾರ್ಕನ್ನು ಪಾರಂಪರಿಕ ತಾಣ ಎಂದು ಘೋಷಿಸಲು ಕಡತ ಮಂಡಿಸಲು ಸೂಚಿಸಿದ್ದಾರೆ. ನಮ್ಮ ನಿಮ್ಮೆಲ್ಲರ ಕೋರಿಕೆಗೆ ಬೆಲೆ ಸಿಕ್ಕಿದೆಯೆಂದು ತಿಳಿಸಲು ಹರ್ಷಿಸುತ್ತೇನೆ. ಅರಣ್ಯ ಮಂತ್ರಿಗಳಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಅನಂತಾನಂತ ವಂದನೆಗಳು. ಇದೊಂದು ಐತಿಹಾಸಿಕ ನಿರ್ಧಾರ ಆಗಿದ್ದು, ಪ್ರಾಣ ವಾಯು ಮತ್ತು ನೀರಿನ ತಾಣ ಉಳಿಸುವ ನಿರ್ಧಾರಕ್ಕೆ ಬೆಂಗಳೂರಿಗರು ಎಂದೆಂದಿಗೂ ಅಭಾರಿಯಾಗಿರುತ್ತಾರೆ ಎಂದು ಅರಣ್ಯ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಎಲ್ಲಾ ಪರಿಸರ ಸಂಘಟನೆಗಳಿಗೂ ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಪಂಜಾಬ್​ನಲ್ಲಿ ಧರ್ಮಸ್ಥಳ ಮೂಲದ ಏರೋಸ್ಪೇಸ್ ಇಂಜಿನಿಯರ್ ಸಾವು ಕೇಸ್​ಗೆ ಟ್ವಿಸ್ಟ್​ – ಕೊನೆಗೂ ‘ಆಕಾಂಕ್ಷ’ ಸಾವಿನ ರಹಸ್ಯ ರಿವೀಲ್​!

Btv Kannada
Author: Btv Kannada

Read More