ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಜನರು ಬೆಚ್ಚಿ ಬಿದ್ದಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳೆಲ್ಲಾ ಹೊಳೆಯಂತಾಗಿದೆ. ಬೆಳಗ್ಗೆಯೇ ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಕೆಲವೆಡೆ ಫ್ಲೈ ಓವರ್ ಬಂದ್ ಮಾಡಲಾಗಿದೆ.
ಬ್ರ್ಯಾಂಡ್ ಬೆಂಗಳೂರಿನ ಬಣ್ಣವನ್ನು ಒಂದು ರಾತ್ರಿ ಸುರಿದ ಮಳೆ ಬಯಲು ಮಾಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಸರ್ಕಾರಿ ಕಚೇರಿಗಳು ಕೂಡ ಜಲಾವೃತವಾಗಿದೆ. ಮನೆಗಳೆಲ್ಲಾ ನೀರಿನಿಂದ ತುಂಬಿ ಹೋಗಿದೆ.
ವಿಲ್ಸನ್ ಗಾರ್ಡನ್‌ನ ವಿವಿಧ ಪ್ರದೇಶಗಳು ಜಲಾವೃತಗೊಂಡಿವೆ. ರಾತ್ರಿ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಹಲವಾರು ಕಾರುಗಳು ನೀರಿನಲ್ಲಿ ಮುಳುಗಿವೆ. ಪಿಜಿಗಳಿಗೆ ನೀರು ನುಗ್ಗಿದ್ದು, ಆಹಾರ ಪದಾರ್ಥಗಳು ಮತ್ತು ವಸ್ತುಗಳು ಹಾನಿಯಾಗಿವೆ.
ಸಿಲ್ಕ್ ಬೋರ್ಡ್ ಜಂಕ್ಷನ್ ಸಂಪೂರ್ಣವಾಗಿ ಜಲಾವೃತವಾಗಿದೆ. ನೀರು ನಿಂತಿರುವ ಹಿನ್ನೆಲೆ ಎಲೆಕ್ಟ್ರಾನಿಕ್ ಸಿಟಿ ಪ್ಲೈ ಓವರ್ ಸಂಚಾರ ಬಂದ್ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮುಚ್ಚಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಟ್ರಾಫಿಕ್ ಜಾಮ್ ಹಿನ್ನೆಲೆ ಸಂಚಾರಿ ಪೊಲೀಸರ ಸೂಚನೆಯಂತೆ ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡ್ ಕಡೆ ಸಾಗುವ ಮಾರ್ಗವನ್ನು ಮುಚ್ಚಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ಕ್ಲಿಯರ್ ಆಗುವವರೆಗೆ ಈ ಮಾರ್ಗವನ್ನು ಮುಚ್ಚಲಾಗುತ್ತದೆ. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಪ್ಲೈ ಓವರ್ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇನ್ನು ದೇವನಹಳ್ಳಿಯಲ್ಲಿ ಮುಂಜಾನೆ ಸುರಿದ ಬಾರಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಬೆಂಗಳೂರು-ಹೈದರಾಬಾದ್ ಹೈವೇಗೆ ಮಳೆ ನೀರು ನುಗ್ಗಿದ್ದು, ರಸ್ತೆಗಳು ಮಳೆ ನೀರಿನಿಂದ ಕೆರೆಯಂತಾಗಿದೆ. ರಸ್ತೆ ಬದಿ ವ್ಯಾಪಾರಿಗಳ ವಸ್ತುಗಳು ಹೈವೇ ಮೇಲಿನ ನೀರಲ್ಲಿ ತೇಲಿ ಹೋಗುತ್ತಿರುವ ದೃಶ್ಯಗಳು ಕಂಡುಬಂದಿದೆ. ನೀರಿನಿಂದ ಬೈಕ್ಗಳನ್ನು ತೆಗೆಯಲಾಗದೆ ಸವಾರರು ಪರದಾಡುತ್ತಿದ್ದಾರೆ.
ಎನ್ಸಿ ಕಾಲೋನಿಯಲ್ಲಿ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಯೊಳಗೆ ನೀರು ತುಂಬಿ ಜನರು ಪರದಾಡುತ್ತಿದ್ದಾರೆ. ಯಾವುದೇ ಪರಿಹಾರ ಸಿಗದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯ ಒಳಗಿರುವ ಎಲ್ಲಾ ಸಾಮಾಗ್ರಿಗಳು ನೀರು ಪಾಲಾಗಿವೆ, ಇದರಿಂದಾಗಿ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಕಳೆದುಕೊಂಡು ಜನರು ನಿರಾಶರಾಗಿದ್ದಾರೆ. ಶಾಸಕರು ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ವರುಣನ ಅಬ್ಬರಕ್ಕೆ CCB ಕಚೇರಿ ಮುಳುಗಡೆ – 8ಕ್ಕೂ ಹೆಚ್ಚು ರೂಮ್ಗಳಲ್ಲಿದ್ದ ಕೇಸ್ ಫೈಲ್ಗಳು ನಾಶ!
