ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಭಾನುವಾರ ರಾತ್ರಿ ಮತ್ತು ಇಂದು ನಸುಕಿನ ಜಾವ ಸುರಿದ ಭಾರೀ ಮಳೆಗೆ ಹಲವು ಭಾಗಗಳಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ನಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ನಗರದಲ್ಲಿ ಮುಂದಿನ 12 ಗಂಟೆಗಳಲ್ಲಿ ಭಾರೀ ಮಳೆಯಾಗಲಿದ್ದು, ಹವಾಮಾನ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದೆ.
ಇಂದು ನಸುಕಿನ ಜಾವ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ನಗರ ತತ್ತರಿಸಿ ಹೋಗಿದ್ದು, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಜಯನಗರ, ವಿಜಯನಗರ, ಚಂದ್ರಲೇಔಟ್, ರಾಜಾಜಿನಗರ, ಆರ್ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬೊಮ್ಮನ ಹಳ್ಳಿ, ನಾಯಂಡಹಳ್ಳಿ, ಕುಮಾರಸ್ವಾಮಿ ಲೇಔಟ್, ಆರ್ಆರ್ ನಗರ ಸೇರಿದಂತೆ ನಗರದ ಹಲವೆಡೆ ಜನರು ಸಂಕಷ್ಟ ಎದುರಿಸಿದ್ದಾರೆ. ಹೆಬ್ಬಾಳ, ಗೊರಗುಂಟೆಪಾಳ್ಯ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರ ಕಷ್ಟವಾಗಿದೆ.
ಇನ್ನು ಸಾಯಿ ಲೇಔಟ್ನಲ್ಲಿಯೂ ಜನರು ಸಂಕಷ್ಟ ಅನುಭವಿಸಿದ್ದು, ರಾತ್ರಿಯಿಡೀ ಸುರಿದ ಮಳೆಗೆ ಲೇಔಟ್ ಪೂರ್ತಿ ಜಲಾವೃತವಾಗಿದೆ. ಮೊಣಕಾಲವರೆಗೂ ನೀರು ತುಂಬಿದ್ದು, ಮನೆಯ ಒಳಗಡೆಯೂ ನೀರು ನುಗ್ಗಿ, ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ರಾತ್ರಿಯಿಡಿ ಜಾಗರಣೆ ಮಾಡಿದ ಮನೆಮಂದಿಗೆ ಬೆಳಗ್ಗೆಯಾಗುತ್ತಿದ್ದಂತೆ ಮತ್ತೆ ಶಾಕ್ ಎದುರಾಗಿದೆ. ರಾಜಕಾಲುವೆ ನೀರು ಮನೆಗೆ ನುಗ್ಗಿ ನಿವಾಸಿಗಳು ಹಿಂಸೆ ಅನುಭವಿಸಿದ್ದಾರೆ. ಚಾಮರಾಜಪೇಟೆಯ ಶಿರಸಿ ವೃತ್ತದ ಬಳಿ ದೊಡ್ಡ ಮರವೊಂದು ರಸ್ತೆಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ವಾಹನ ಸಿಲುಕಿಲ್ಲ, ಪ್ರಾಣಾಪಾಯವಾಗಿಲ್ಲ.
ಮುಂಜಾನೆಯೇ ಟ್ರಾಫಿಕ್ ಜಾಮ್, ಸಂಚಾರಕ್ಕೆ ಅಡಚಣೆ : ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ನಗರದ ಹೊರ ಹೋಗುವ ಮತ್ತು ಒಳ ಬರುವ ಕಡೆಗೆ ನಿಧಾನಗತಿಯ ಸಂಚಾರ ಇದೆ. ವಿದ್ಯಾಶಿಲ್ಪ ರೈಲ್ವೆ ಅಂಡರ್ಪಾಸ್ ನಿಂದ ಏರ್ಪೋರ್ಟ್ ಕಡೆಗೂ ಸಂಚಾರ ನಿಧಾನ ಇದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೆ, ಇನ್ನೂ ಅನೇಕ ಪ್ರದೇಶಗಳಲ್ಲಿ ನಿಧಾನಗತಿಯ ಸಂಚಾರ ಇರುವುದಾಗಿ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಸಂಚಾರಕ್ಕೆ ಅಡಚಣೆ, ನಿಧಾನಗತಿಯ ಸಂಚಾರ?
- ಹೆಚ್ಎಸ್ಆರ್ ಲೇಔಟ್ ಡಿಪೋ ದಿಂದ14 ನೇ ಮುಖ್ಯ ರಸ್ತೆಯ ಕಡೆಗೆ.
- ಕನಕಪುರ ಮುಖ್ಯ ರಸ್ತೆ (ನೈಸ್ ರಸ್ತೆ) ಯಿಂದ ಕೋಣನಕುಂಟೆ ಕಡೆಗೆ.
- ಶಿರಸಿ ವೃತ್ತದ ಬಳಿ ಮರ ಬಿದ್ದಿರುವುದರಿಂದ ಉಮಾ ಥಿಯೇಟರ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
- ಪ್ರಸನ್ನ ಚಿತ್ರ ಮಂದಿರದಿಂದ ಬಸವ ಮಂಟಪ ಸಿಗ್ನಲ್ ಕಡೆಗೆ.
- ಸೋನಿ ವರ್ಲ್ಡ್ ಸಿಗ್ನಲ್ನಿಂದ ಮಹಾರಾಜ ಸಿಗ್ನಲ್ ಕಡೆಗೆ.
- ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಬೆಳ್ಳಂದೂರು ಕಡೆಗೆ.
- ಲೌರಿ ರೈಲ್ವೆ ಅಂಡರ್ಪಾಸ್ ನಿಂದ ಮಹದೇವಪುರ ಕಡೆಗೆ.
- ಬೇಲಿಮಠ ಜಂಕ್ಷನ್ ನಿಂದ ಬಿನ್ನಿಮಿಲ್ ಕಡೆಗೆ.
- ಆದರ್ಶ ಜಂಕ್ಷನ್ ನಿಂದ ರಾಮಯ್ಯ ಜಂಕ್ಷನ್ ಕಡೆಗೆ.
- ಸಿಲ್ಕ್ ಬೋರ್ಡ್ ನಿಂದ ಅಗರ ಸಿಗ್ನಲ್ ಕಡೆಗೆ.
- ಕೆನ್ಸಿಂಗ್ಟನ್ ನಿಂದ ಗುರುದ್ವಾರ ಕಡೆಗೆ.
- ಆಟೋ ಮಾರ್ಟ್ ನಿಂದ ಅಗರ ಕಡೆಗೆ.
- ಶಾಹಿ ಗಾರ್ಮೆಂಟ್ಸ್, ಬನ್ನೇರುಘಟ್ಟ ರಸ್ತೆ ಯಿಂದ ಹುಳಿಮಾವು ಗೇಟ್ ಕಡೆಗೆ.
- ರಾಷ್ಟ್ರೋತ್ಥಾನ ಸ್ಕೂಲ್ ಜಂಕ್ಷನ್ ನಿಂದ ಕ್ಲೌಡ್-9 ಆಸ್ಪತ್ರೆ,ಥಣಿಸಂದ್ರ ರಸ್ತೆ ಕಡೆಗೆ.
ಇದನ್ನೂ ಓದಿ : ಆರ್ಸಿಬಿ, ಗುಜರಾತ್, ಪಂಜಾಬ್ ಪ್ಲೇ ಆಫ್‌ಗೆ ಎಂಟ್ರಿ – ಇನ್ನೊಂದು ಸ್ಥಾನಕ್ಕಾಗಿ 3 ತಂಡಗಳ ನಡುವೆ ಬಿಗ್ ಫೈಟ್!
