ನವದೆಹಲಿ : ಭಾರತದ ಮೂರು ಪ್ರಮುಖ ಸ್ಥಳಗಳಲ್ಲಿ ನಡೆದ ದಾಳಿಯ ಮಾಸ್ಟರ್ ಮೈಂಡ್, ‘ಲಷ್ಕರ್ ಎ ತೈಬಾ’ ಸಂಘಟನೆ ಉಗ್ರ ಸೈಫುಲ್ಲಾ ಖಾಲಿದ್ನನ್ನು ಪಾಕ್ನ ಸಿಂಧ್ ಪ್ರಾಂತ್ಯದಲ್ಲಿ ಭಾನುವಾರ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನ ಸರ್ಕಾರದಿಂದ ಭದ್ರತೆ ಒದಗಿಸಲ್ಪಟ್ಟಿದ್ದ ಸೈಫುಲ್ಲಾ ನಿನ್ನೆ ಮಧ್ಯಾಹ್ನ ಸಿಂಧ್‌ನ ಮಟ್ಲಿಯಲ್ಲಿರುವ ತಮ್ಮ ನಿವಾಸದಿಂದ ಹೊರಬರುತ್ತಿದ್ದ ವೇಳೆ ಹಂತಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಸೈಫುಲ್ಲಾ ಖಾಲಿದ್ 2006ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಯ ಮೇಲೆ ನಡೆದ ದಾಳಿಯ ಸಂಚುಕೋರನಾಗಿದ್ದನು. ಅಲ್ಲದೆ, 2001ರಲ್ಲಿ ರಾಂಪುರದಲ್ಲಿನ ಸಿಆರ್‌ಪಿಎಫ್ ಕ್ಯಾಂಪ್ ಮೇಲಿನ ದಾಳಿಯ ಪ್ರಮುಖ ಆರೋಪಿಯಾಗಿದ್ದನು. 2005ರಲ್ಲಿಯೂ ಬೆಂಗಳೂರಿನ IISC (ಭಾರತೀಯ ವಿಜ್ಞಾನ ಸಂಸ್ಥೆ) ಮೇಲೆ ನಡೆದ ದಾಳಿಯ ಹಿಂದೆಯೂ ಈತನ ಕೈವಾಡವಿತ್ತು. ಈ ದಾಳಿಯಲ್ಲಿ ಐಐಟಿ ದೆಹಲಿಯ ಪ್ರೊ. ಮುನೀಶ್ ಚಂದ್ರ ಪುರಿ ಜೀವ ಕಳೆದುಕೊಂಡು ನಾಲ್ವರು ಗಾಯಗೊಂಡಿದ್ದರು.
ಹತ್ಯೆಯಾದ ಉಗ್ರ ಸೈಫುಲ್ಲಾ ಖಾಲಿದ್ ಎಲ್‌ಇಟಿ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದನು. ನೇಪಾಳದಲ್ಲೂ ಎಲ್‌ಇಟಿಯ ಭಯೋತ್ಪಾದಕ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದನು. ವರದಿಯ ಪ್ರಕಾರ, ಉಗ್ರ ಸೈಫುಲ್ಲಾ ಖಾಲಿದ್ ಎಲ್‌ಇಟಿ ಭಯೋತ್ಪಾದಕರನ್ನು ನೇಪಾಳದ ಮೂಲಕ ಭಾರತಕ್ಕೆ ಕಳುಹಿಸುತ್ತಿದ್ದನು.
ಇತ್ತೀಚೆಗೆ, ಖಾಲಿದ್ ತನ್ನ ಅಡಗುತಾಣವನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಮಟ್ಲಿಗೆ ಸ್ಥಳಾಂತರಿಸಿದ್ದನು. ನಿನ್ನೆ ಮಧ್ಯಾಹ್ನ ಸಿಂಧ್‌ನ ಮಟ್ಲಿಯಲ್ಲಿರುವ ಸೈಫುಲ್ಲಾ ಖಾಲಿದ್ ನಿವಾಸದಿಂದ ಹೊರಬರುತ್ತಿದ್ದ ವೇಳೆ ಹಂತಕರು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ : RCB-KKR ಪಂದ್ಯ ರದ್ದು : ಟಿಕೆಟ್ ಹಣ ಮರುಪಾವತಿಸುವುದಾಗಿ ಫ್ರಾಂಚೈಸಿ ಘೋಷಣೆ!
