ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಅದರಂತೆ ಇಂದು ಕೂಡ ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ.
ಇಂದು ಸಂಜೆಯಿಂದ ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಕಬ್ಬನ್ಪಾರ್ಕ್, ಚಿನ್ನಸ್ವಾಮಿ ಮೈದಾನ, ವಿಧಾನಸೌಧ, ಕೆ.ಆರ್.ಮಾರ್ಕೆಟ್, ಮೆಜೆಸ್ಟೆಕ್, ರಾಜಾಜಿನಗರ, ಲಾಲ್ಬಾಗ್, ಜಯನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ದೇವನಹಳ್ಳಿ, ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಆವಲಹಳ್ಳಿ, ವೈಟ್‌ಫೀಲ್ಡ್ ಹಾಗೂ ನಾಗಾವರ ಸೇರಿದಂತೆ ವಿವಿಧ ಭಾಗದಲ್ಲಿಯೂ ವರುಣನ ಅಬ್ಬರ ಜೋರಾಗಿದೆ.
ಐಪಿಎಲ್ ಪಂದ್ಯಕ್ಕೂ ಮಳೆ ಅಡ್ಡಿ : ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವರ್ಸಸ್ ಕೆಕೆಆರ್ ಪಂದ್ಯ ನಡೆಯಲಿದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಮಳೆಯಾಗುತ್ತಿರುವುದರಿಂದ ಆರ್‌ಸಿಬಿ ಅಭಿಮಾನಿಗಳಲ್ಲಿ ಭಾರೀ ನಿರಾಶೆ ಮೂಡಿದೆ. ಆರ್‌ಸಿಬಿ-ಕೆಕೆಆರ್ ನಡುವಿನ ಪಂದ್ಯದ ಟಾಸ್ ಈಗಾಗಲೇ ವಿಳಂಬವಾಗಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಟಾಸ್ ಮತ್ತಷ್ಟು ವಿಳಂಬಬವಾಗುವ ಸಾಧ್ಯತೆ ಇದೆ. ಕ್ರೀಡಾಂಗಣ ಭರ್ತಿಯಾಗಿದ್ದು, ಅಭಿಮಾನಿಗಳು ಮಳೆ ನಿಲ್ಲಲು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಮ್ ಇರುವ ಕಾರಣ ಪಂದ್ಯ ನಿಂತ ತಕ್ಷಣವೇ ಪಂದ್ಯಕ್ಕೆ ಮೈದಾನ ಸಜ್ಜುಗೊಳ್ಳಲಿದೆ.
ಭಾರಿ ಮಳೆಯಾಗುತ್ತಿರುವುದರಿಂದ ನಗರದ ಹಲವು ರಸ್ತೆಗಳು ಕೆರೆಯಂತಾಗಿದೆ. ಹೆಬ್ಬಾಳದಲ್ಲಿ ಮಳೆ ಬರುತ್ತಿರುವುದರಿಂದ ವೀರಣ್ಣಪಾಳ್ಯ ಕಡೆಯಿಂದ ಹೆಬ್ಬಾಳ ಕಡೆ ಹೋಗುವ ರಸ್ತೆಯಲ್ಲಿ ತೀವ್ರ ಸಂಚಾರದಟ್ಟಣೆ ಉಂಟಾಗಿದೆ. ಹಾಗೆ, ವರ್ತೂರು ಕಡೆಯಿಂದ, ವೈಟಫಿಲ್ಡ್ ಕಡೆಗೆ ಹೋಗುವ ಮಾರ್ಗದಲ್ಲಿ, ಕಸ್ತೂರಿನಗರ ಕಡೆಯಿಂದ ಹೆಬ್ಬಾಳ ಮುಖ್ಯ ರಸ್ತೆಯ ಕಡೆಗೆ ಹೋಗುವ ಮಾರ್ಗದಲ್ಲಿ, ಬಾಗಲೂರು ಕಡೆಯಿಂದ ನಗರ ಮತ್ತು ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಮತ್ತು ನ್ಯಾಷನಲ್ ಗೇಮ್ಸ್ ವಿಲೇಜ್ ಗೆಟ್ನಿಂದ ಸೋನಿ ವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಿಧಾನವಾಗಿ ಚಲಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಕೆ.ಆರ್ ಪುರದಿಂದ ಟಿನ್‌ಫ್ಯಾಕ್ಟರಿ ಕಡೆಗೆ, ನಾಗಾವಾರ ಸರ್ವೀಸ್ ರಸ್ತೆಯಿಂದ ಹೆಬ್ಬಾಳ ಕಡೆಗೆ, ಗುಂಜೂರು ಕಡೆಯಿಂದ ವರ್ತೂರು ಕಡೆಗೆ, ವರ್ತೂರು ಕೋಡಿಯಿಂದ ಗುಂಜೂರು ಕಡೆಗೆ, ಹುಣಸಮಾರನಹಳ್ಳಿ ಸರ್ವೀಸ್ ರಸ್ತೆಯಿಂದ ಏರ್‌ಪೋರ್ಟ್ ಕಡೆಗೆ ನಿಧಾನಗತಿಯ ಸಂಚಾರವಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಹಲವು ರಸ್ತೆಗಳಲ್ಲಿ ನಿಧಾನಗತಿ ಸಂಚಾರ
- ಪಣತ್ತೂರು ,ಪಣತ್ತೂರು ರೈಲ್ವೆ ಸೇತುವೆ ಎರಡು ಬದಿ ರಸ್ತೆಯಕಡೆಗೆ
- ದೇವರ ಬಿಸನಹಳ್ಳಿ ಕಡೆಯಿಂದ,ಸಕ್ರ ಆಸ್ಪತ್ರೆಯಕಡೆಗೆ.
- ಜೆ ಬಿ ನಗರ ರೈಲ್ವೆ ಸೇತುವೆ ಕಡೆಯಿಂದ ಭದ್ರಪ್ಪ ಲೇಔಟ್ಕಡೆಗೆ
- ವಿಂಡ್ಸನ್ ಮ್ಯಾನರ್ ರೈಲ್ವೆ ಸೇತುವೆ ಕಡೆಯಿಂದ ಪಿ ಜಿ ಹಳ್ಳಿ ಕಡೆಗೆ.
- ರೂಬಿ 2 ಕಡೆಯಿಂದ, ಜಿ ಡಿ ಮತ್ತು ಜೆ ಪಿ ನಗರದ ಕಡೆಗೆ.
- ಸೋನಿ ವರ್ಲ್ಡ್ ಕಡೆಯಿಂದ ಶ್ರೀನಿವಾಗಿಲು ಕಡೆಗೆ.
- ಜೆ ಡಿ ಮರ ಕಡೆಯಿಂದ ಗೋಪಾಲನ್ ಮಾಲ್ ಕಡೆಗೆ
- ಕಮಾಂಡೋ ಆಸ್ಪತ್ರೆ ಕಡೆಯಿಂದ ಎಎಸಸಿ ಜಂಕ್ಷನ್ ಕಡೆಗೆ.
- ಅಯೋಧ್ಯ ಜಂಕ್ಷನ್ ಕಡೆಯಿಂದ,ಟ್ಯಾನರಿ ರಸ್ತೆಯ ಕಡೆಗೆ.
- ವೀರಣ್ಣಪಾಳ್ಯ ಜಂಕ್ಷನ್ ಕಡೆಯಿಂದ ಹೆಬ್ಬಾಳ ವೃತ್ತದ ಕಡೆಗೆ.
ಇದನ್ನೂ ಓದಿ : ಪ್ರಶಾಂತ್ ನೀಲ್ ಚಿತ್ರದಿಂದ ಜೂ.NTR ಬರ್ತ್‌ಡೇಗೆ ಇಲ್ಲ ಸರ್ಪ್ರೈಸ್ – ಅಧಿಕೃತ ಹೇಳಿಕೆ ನೀಡಿದ ಮೈತ್ರಿ ಮೂವಿ ಮೇಕರ್ಸ್!
